ನವದೆಹಲಿ: ಪತ್ನಿಯ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ಜೀವಂತವಾಗಿ ಸುಟ್ಟುಹಾಕಿದ ಆರೋಪದ ಮೇಲೆ ಬಂಧಿತನಾಗಿರುವ ಗ್ರೇಟರ್ ನೋಯ್ಡಾದ ವ್ಯಕ್ತಿ, ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. “ಆಕೆ ನನ್ನನ್ನು ಬಿಟ್ಟು ಹೋದ ಕಾರಣಕ್ಕೆ, ಇಡೀ ಜಗತ್ತು ನನ್ನನ್ನು ಕೊಲೆಗಾರ ಎಂದು ಕರೆಯುತ್ತಿದೆ,” ಎಂದು ಬಂಧನಕ್ಕೆ ಕೆಲವೇ ಗಂಟೆಗಳ ಮೊದಲು ಆತ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾನೆ.
36 ಲಕ್ಷ ರೂ. ವರದಕ್ಷಿಣೆಗಾಗಿ ನಿಕ್ಕಿ ಎಂಬ ಮಹಿಳೆಗೆ ಚಿತ್ರಹಿಂಸೆ ನೀಡಿ, ಸಜೀವ ದಹನ ಮಾಡಲಾಗಿದೆ. ಈ ಘಟನೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪತಿ ವಿಪಿನ್ ಮತ್ತು ಇನ್ನೊಬ್ಬ ಮಹಿಳೆ ಸೇರಿ ನಿಕ್ಕಿಯ ಕೂದಲನ್ನು ಹಿಡಿದು ಎಳೆದಾಡಿ, ಥಳಿಸುತ್ತಿರುವ ವಿಡಿಯೋಗಳು ಕೂಡ ಲಭ್ಯವಾಗಿವೆ. ಬೆಂಕಿ ಹೊತ್ತಿಕೊಂಡ ಸ್ಥಿತಿಯಲ್ಲಿ ನಿಕ್ಕಿ ಮೆಟ್ಟಿಲುಗಳಿಂದ ಇಳಿದು ಬರುತ್ತಿರುವ ಮತ್ತು ತೀವ್ರ ಸುಟ್ಟಗಾಯಗಳೊಂದಿಗೆ ನೆಲದ ಮೇಲೆ ಕುಳಿತಿರುವ ದೃಶ್ಯಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಬಂಧನಕ್ಕೂ ಮುನ್ನ ಇನ್‌ಸ್ಟಾಗ್ರಾಂನಲ್ಲಿ ಆರೋಪಿಯ ನಾಟಕ
ಹೀಗಿದ್ದರೂ ತನ್ನ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ತನ್ನನ್ನು “ವಕೀಲ” ಎಂದು ಹೇಳಿಕೊಂಡಿರುವ ವಿಪಿನ್, ಶನಿವಾರ ಮುಂಜಾನೆ 1 ಗಂಟೆ ಸುಮಾರಿಗೆ (ಬಂಧನಕ್ಕೂ ಮುನ್ನ) ಪೋಸ್ಟ್ ವೊಂದನ್ನು ಮಾಡಿದ್ದಾರೆ. “ನಿನಗೆ ಏನಾಯಿತು ಎಂದು ನನಗೆ ಯಾಕೆ ಹೇಳಲಿಲ್ಲ? ನನ್ನನ್ನು ಯಾಕೆ ಬಿಟ್ಟು ಹೋದೆ? ನೀನು ಯಾಕೆ ಹೀಗೆ ಮಾಡಿದೆ? ಜಗತ್ತು ನನ್ನನ್ನು ಕೊಲೆಗಾರ ಎನ್ನುತ್ತಿದೆ ನಿಕ್ಕಿ” ಎಂದು ಆತ ಬರೆದಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ, “‘ನೀನು ಹೋದಾಗಿನಿಂದ ನನಗೆ ಬಹಳ ಅನ್ಯಾಯವಾಗುತ್ತಿದೆ’” ಎಂದೂ ಪೋಸ್ಟ್ ಮಾಡಿ, ತಾನೇ ಸಂತ್ರಸ್ತ ಎಂಬಂತೆ ಬಿಂಬಿಸಿಕೊಂಡಿದ್ದಾನೆ.
ಮತ್ತೊಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ, ನಿಕ್ಕಿ ಮತ್ತು ವಿಪಿನ್ ತಮ್ಮ ಮಗನೊಂದಿಗೆ ಸಂತೋಷದಿಂದ ನಗುತ್ತಿರುವ ವಿಡಿಯೋವನ್ನು ಹಂಚಿಕೊಂಡು, “‘ನನ್ನ ಕಥೆ ಮುಗಿಯಿತು. ಈಗ ನನ್ನ ಬಳಿ ಏನೂ ಉಳಿದಿಲ್ಲ’” ಎಂದೂ ಬರೆದುಕೊಂಡಿದ್ದಾನೆ.
ವಾಸ್ತವವೇ ಬೇರೆ
ಆದರೆ, ನಿಕ್ಕಿಯ ಸಹೋದರಿ ಕಾಂಚನ್ ಮತ್ತು ನಿಕ್ಕಿಯ ಮಗ ನೀಡಿರುವ ಹೇಳಿಕೆಗಳು ಈ ನಾಟಕೀಯ ಪೋಸ್ಟ್‌ಗಳ ಹಿಂದಿನ ಕ್ರೂರ ಸತ್ಯವನ್ನು ಬಯಲು ಮಾಡಿವೆ. “ನಮಗಿಬ್ಬರಿಗೂ ವರದಕ್ಷಿಣೆಗಾಗಿ ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದರು. 36 ಲಕ್ಷ ತರುವಂತೆ ಒತ್ತಡ ಹೇರುತ್ತಿದ್ದರು. ಅದೇ ದಿನ ಸಂಜೆ, ನನ್ನ ಮತ್ತು ಮಕ್ಕಳ ಕಣ್ಣೆದುರೇ ನನ್ನ ಸಹೋದರಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದರು. ನಂತರ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಸುರಿದು ಬೆಂಕಿ ಹಚ್ಚಿದರು. ನಾನು ಅವಳನ್ನು ಉಳಿಸಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ,” ಎಂದು ಕಾಂಚನ್ ಕಣ್ಣೀರು ಹಾಕಿದ್ದಾರೆ.
ನಿಕ್ಕಿಯ ಮಗ ಕೂಡ, “‘ಅವರು ಅಮ್ಮನ ಮೇಲೆ ಏನೋ ಸುರಿದ್ರು, ಕಪಾಳಕ್ಕೆ ಹೊಡೆದು ಲೈಟರ್‌ನಿಂದ ಬೆಂಕಿ ಹಚ್ಚಿದ್ರು’” ಎಂದು ನಡೆದ ಘಟನೆಯನ್ನು ವಿವರಿಸಿದ್ದಾನೆ.
ಈ ಪ್ರಕರಣದಲ್ಲಿ ವಿಪಿನ್ ಜೊತೆಗೆ ಆತನ ಪೋಷಕರು ಮತ್ತು ಸಹೋದರನ ಹೆಸರನ್ನೂ ಸೇರಿಸಲಾಗಿದ್ದು, ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.



















