ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾರತೀಯ ವನಿತೆಯರ ತಂಡ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ, ಭಾರತ ಸೆಮಿಫೈನಲ್ ತಲುಪಲು ಮುಂದಿನ ಪಂದ್ಯ ಗೆಲ್ಲಬೇಬೇಕಾದ ಒತ್ತಡದಲ್ಲಿದೆ. ಇದರೊಂದಿಗೆ ಅದೃಷ್ಟ ಕೂಡ ಕೈ ಹಿಡಿಯಬೇಕು.
ಭಾರತ ತಂಡ ತಾನಾಡಿದ್ದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುಧ ಸೋಲು ಕಂಡಿತ್ತು. ಆನಂತರ ಪಾಕಿಸ್ತಾನ್ ಹಾಗೂ ಶ್ರೀಲಂಕಾ ವಿರುದ್ಧ ಗೆಲುವು ದಾಖಲಿಸಿತು. ಶ್ರೀಲಂಕಾ ವಿರುದ್ಧದ ಪಂದ್ಯವು ಭಾರತದ ಪಾಲಿಗೆ ನಿರ್ಣಾಯಕವಾಗಿತ್ತು. ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಉತ್ತಮ ಪ್ರದರ್ಶನ ತೋರಿದ ಆರಂಭಿಕ ಆಟಗಾರರಾದ ಶಫಾಲಿ ವರ್ಮಾ (43) ಹಾಗೂ ಸ್ಮೃತಿ ಮಂಧಾನ (50) ಮೊದಲ ವಿಕೆಟ್ ಗೆ 98 ರನ್ ಗಳ ಅದ್ಭುತ ಕಾಣಿಕೆ ನೀಡಿದರು.
ಆನಂತರ ಹೊಡಿ ಬಡಿ ಆಟಕ್ಕೆ ಮುಂದಾದ ಹರ್ಮನ್ ಪ್ರೀತ್ ಕೌರ್ ಕೇವಲ 27 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 52 ರನ್ ಗಳಿಸಿತು. ಹೀಗಾಗಿ ಭಾರತ ತಂಡವು 173 ರನ್ ಗಲಿಸಿತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 90 ರನ್ ಗಳಿಗೆ ಆಲೌಟ್ ಆಯಿತು. ಹೀಗಾಗಿ ಭಾರತ 80 ರನ್ ಗಳ ಅಂತರದಲ್ಲಿ ದೊಡ್ಡ ಜಯ ಸಾಧಿಸುವ ಮೂಲಕ ನೆಟ್ ರನ್ ರೇಟ್ ಕೂಡ ಉತ್ತಮಗೊಳಿಸಿಕೊಂಡಿತು. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿಯಿತು. +0.576 ನೆಟ್ ರನ್ ರೇಟ್ ಹೊಂದಿರುವ ಭಾರತ ತಂಡವು ತನ್ನ ಕೊನೆಯ ಪಂದ್ಯದಲ್ಲೂ ಭರ್ಜರಿ ಜಯ ಸಾಧಿಸಿದರೆ ಮಾತ್ರ ಸೆಮಿಫೈನಲ್ ತಲುಪಬಹುದು. ಅಲ್ಲದೇ, ಪಾಕಿಸ್ತಾನ್ ( +0.555) ಹಾಗೂ ನ್ಯೂಜಿಲೆಂಡ್ (-0.050) ಅಂಕದೊಂದಿಗೆ ಸೆಮಿಫೈನಲ್ ರೇಸ್ ನಲ್ಲಿವೆ. ತಲಾ 2 ಅಂಕಗಳನ್ನು ಹೊಂದಿರುವ ಈ ತಂಡಗಳಿಗೆ ಇನ್ನೂ 2 ಪಂದ್ಯಗಳಿವೆ. ಆದರೆ ಭಾರತಕ್ಕೆ ಮಾತ್ರ ಇನ್ನೂ ಒಂದು ಪಂದ್ಯ ಬಾಕಿ ಇದೆ. ಕೊನೆಯ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಒಟ್ಟು 6 ಅಂಕಗಳನ್ನು ಸಂಪಾದಿಸಲಿದೆ.
ಒಂದು ವೇಳೆ ಪಾಕಿಸ್ತಾನ್ ಅಥವಾ ನ್ಯೂಜಿಲೆಂಡ್ ತಂಡಗಳು ಮುಂದಿನ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದರೆ, 6 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ಏರಬಹುದು. ಹೀಗಾಗಿ ಭಾರತ ತಂಡಕ್ಕೆ ತನ್ನ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ಅನಿವಾರ್ಯವಾಗಿದೆ.
ಗ್ರೂಪ್ ಎ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವು 2 ಗೆಲುವುಗಳೊಂದಿಗೆ ಒಟ್ಟು +2.524 ನೆಟ್ ರನ್ ರೇಟ್ ಹೊಂದಿದೆ. ಇನ್ನುಳಿದ ಎರಡು ಮ್ಯಾಚ್ಗಳಲ್ಲಿ ಒಂದು ಪಂದ್ಯವನ್ನು ಗೆದ್ದರೂ ಉತ್ತಮ ನೆಟ್ ರನ್ ರೇಟ್ ಹೊಂದಿರುವ ಕಾರಣ ಸೆಮಿಫೈನಲ್ ಅರ್ಹತೆ ಖಚಿತಪಡಿಸಿಕೊಳ್ಳಬಹುದು. ನ್ಯೂಜಿಲೆಂಡ್ ತಂಡಕ್ಕೆ ಕೂಡ ಇದೇ ರೀತಿಯ ಅವಕಾಶವಿದೆ. ಭಾರತ ತಂಡವು ಅ. 13ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನೆಡಸಲಿದ್ದು, ಸೆಮಿಫೈನಲ್ ಭವಿಷ್ಯ ಅಂದು ನಿರ್ಧಾರವಾಗಲಿದೆ.