ಅಹಮದಾಬಾದ್: ಗುಜರಾತ್‌ನ ಬನಸ್ಕಾಂತಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ಯುವತಿಯೊಬ್ಬಳ ಸಾವನ್ನು “ಸಹಜ ಸಾವು” ಎಂದು ಭಾವಿಸಲಾಗಿತ್ತು. ಆದರೆ, ಆಕೆ ಸಾಯುವ ಕೆಲವೇ ಗಂಟೆಗಳ ಮೊದಲು ತನ್ನ ಪ್ರಿಯಕರನಿಗೆ ಕಳುಹಿಸಿದ್ದ “ನನ್ನನ್ನು ಉಳಿಸು” ಎಂಬ ಒಂದು ಸಂದೇಶವು, ಭೀಕರ ಮರ್ಯಾದೆಗೇಡು ಹತ್ಯೆಯ ಪ್ರಕರಣವನ್ನು ಬಯಲಿಗೆಳೆದಿದೆ. ಈ ಸಂಬಂಧ ಯುವತಿಯ ಚಿಕ್ಕಪ್ಪ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ತಂದೆ ತಲೆಮರೆಸಿಕೊಂಡಿದ್ದಾನೆ.

ಆಗಿದ್ದೇನು?
ಥರಾಡ್‌ನ ದಂತಿಯಾ ಗ್ರಾಮದ ನಿವಾಸಿ, 18 ವರ್ಷದ ಚಂದ್ರಿಕಾ ಚೌಧರಿ ಎಂಬಾಕೆ ಹರೀಶ್ ಚೌಧರಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಸಂಬಂಧಕ್ಕೆ ಆಕೆಯ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತ್ತು ಮತ್ತು ಬೇರೊಬ್ಬನೊಂದಿಗೆ ಮದುವೆ ಮಾಡಲು ನಿರ್ಧರಿಸಿತ್ತು. ತನ್ನ ಕುಟುಂಬದ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅರಿತಿದ್ದ ಚಂದ್ರಿಕಾ, ಜೂನ್ 24ರ ರಾತ್ರಿ ತನ್ನ ಪ್ರಿಯಕರ ಹರೀಶ್‌ಗೆ ಇನ್‌ಸ್ಟಾಗ್ರಾಂನಲ್ಲಿ ಸಂದೇಶವೊಂದನ್ನು ಕಳುಹಿಸಿದ್ದಳು.
“ಪ್ಲೀಸ್, ಬಂದು ನನ್ನನ್ನು ಕರೆದುಕೊಂಡು ಹೋಗು. ಇಲ್ಲದಿದ್ದರೆ ನನ್ನ ಕುಟುಂಬದವರು ನನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡುತ್ತಾರೆ. ನಾನು ಮದುವೆಗೆ ಒಪ್ಪದಿದ್ದರೆ, ಅವರು ನನ್ನನ್ನು ಕೊಲ್ಲುತ್ತಾರೆ. ನನ್ನನ್ನು ಉಳಿಸು,” ಎಂದು ಆಕೆ ತನ್ನ ಸಂದೇಶದಲ್ಲಿ ಬೇಡಿಕೊಂಡಿದ್ದಳು. ಈ ಸಂದೇಶ ಕಳುಹಿಸಿದ ಕೆಲವೇ ಗಂಟೆಗಳಲ್ಲಿ ಚಂದ್ರಿಕಾ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಪ್ರಿಯಕರನ ಅನುಮಾನದಿಂದ ತನಿಖೆ ಚುರುಕು
ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದೇ ಹೇಳಲಾಗಿತ್ತು. ಆದರೆ, ಹರೀಶ್‌ಗೆ ಈ ಬಗ್ಗೆ ಅನುಮಾನವಿದ್ದ ಕಾರಣ, ಆತ ಚಂದ್ರಿಕಾ ಸಾವು ಸ್ವಾಭಾವಿಕವಲ್ಲ, ಅದೊಂದು ಕೊಲೆ ಎಂದು ಪೊಲೀಸರಿಗೆ ದೂರು ನೀಡಿದನು. ಇದರ ಆಧಾರದ ಮೇಲೆ ತನಿಖೆ ಆರಂಭವಾಯಿತು. ತನಿಖೆಯ ವಿವರಗಳನ್ನು ನೀಡಿದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ನಾಲಾ, “ಇದು ಸಂತ್ರಸ್ತೆಯ ತಂದೆ ಸೇಧಾಭಾಯಿ ಪಟೇಲ್ ಮತ್ತು ಚಿಕ್ಕಪ್ಪ ಶಿವಾಭಾಯಿ ಪಟೇಲ್ ಅವರ ನಡೆಸಿದ ಯೋಜಿತ ಕೊಲೆ,” ಎಂದು ಖಚಿತಪಡಿಸಿದ್ದಾರೆ.
ಪೊಲೀಸರ ಪ್ರಕಾರ, ಕೆಲವು ದಿನಗಳ ಹಿಂದೆ ಚಂದ್ರಿಕಾ, ಹರೀಶ್ ಜೊತೆ ಮನೆಯಿಂದ ಓಡಿಹೋಗಿದ್ದಳು. ಆಗ ಕುಟುಂಬದವರು ನಾಪತ್ತೆ ದೂರು ನೀಡಿದಾಗ, ಪೊಲೀಸರು ಅವರನ್ನು ಪತ್ತೆಹಚ್ಚಿ ಚಂದ್ರಿಕಾಳನ್ನು ಮನೆಗೆ ಕಳುಹಿಸಿದ್ದರು. “ಸ್ವಾಭಾವಿಕ ಸಾವಿನ ಪ್ರಕರಣದಲ್ಲೂ, ಕುಟುಂಬದವರು ವೈದ್ಯರನ್ನು ಸಂಪರ್ಕಿಸುವುದು ಸಾಮಾನ್ಯ. ಆದರೆ, ಈಕೆಯನ್ನು ವೈದ್ಯರ ಬಳಿ ಕರೆದೊಯ್ಯಲಾಗಿಲ್ಲ. ಆತುರಾತುರವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ. ಆಕೆಯ ಸಾವಿನ ಬಗ್ಗೆ ಆಕೆಯ ಸಹೋದರನಿಗೂ ಮಾಹಿತಿ ನೀಡಿಲ್ಲ. ಇದರಿಂದ ಕುಟುಂಬವು ಏನನ್ನೋ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂಬ ಅನುಮಾನ ಬಲವಾಯಿತು,” ಎಂದು ಎಎಸ್ಪಿ ನಾಲಾ ತಿಳಿಸಿದ್ದಾರೆ.
ಮೂರು ಹಂತದ ಕೊಲೆ ಯೋಜನೆ
ಹೆಚ್ಚಿನ ತನಿಖೆಯಿಂದ, ಚಂದ್ರಿಕಾ ಮದುವೆಗೆ ಒಪ್ಪದಿದ್ದರೆ, ಜೂನ್ 24ರ ರಾತ್ರಿಯೇ ಆಕೆಯನ್ನು ಕೊಲ್ಲಲು ತಂದೆ ಮತ್ತು ಚಿಕ್ಕಪ್ಪ ಮೂರು ಹಂತದ ಯೋಜನೆ ರೂಪಿಸಿದ್ದರು ಎಂಬುದು ಬೆಳಕಿಗೆ ಬಂದಿದೆ. “ಮೊದಲು, ಅವರು ಆಕೆಗೆ ನಿದ್ರೆ ಮಾತ್ರೆ ನೀಡಿ ಮಲಗಿಸಿದ್ದಾರೆ. ನಂತರ, ಆಕೆಯ ಕತ್ತು ಹಿಸುಕಿ ಕೊಂದು, ಆತ್ಮಹತ್ಯೆ ಎಂದು ಬಿಂಬಿಸಲು ಆಕೆಯ ದೇಹವನ್ನು ನೇಣು ಹಾಕಿದ್ದಾರೆ. ರಾತ್ರಿ ದೇಹವನ್ನು ನೋಡಿದವರು ಆತ್ಮಹತ್ಯೆ ಎಂದು ನಂಬಿದ್ದರು. ಆದರೆ, ಬೆಳಿಗ್ಗೆ ಅವರು ಆಕೆ ಸ್ವಾಭಾವಿಕವಾಗಿ ಮೃತಪಟ್ಟಿದ್ದಾಳೆ ಎಂದು ಕಥೆ ಬದಲಾಯಿಸಿದರು,” ಎಂದು ಅಧಿಕಾರಿ ವಿವರಿಸಿದ್ದಾರೆ.
ತಾಂತ್ರಿಕ ವಿಶ್ಲೇಷಣೆ, ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಕುಟುಂಬದವರ ಗೊಂದಲಕಾರಿ ಹೇಳಿಕೆಗಳ ಆಧಾರದ ಮೇಲೆ, ಇದು “ಯೋಜಿತ ಮತ್ತು ನಾಟಕೀಯ ಕೊಲೆ” ಎಂದು ತೀರ್ಮಾನಿಸಿ, ಥರಾಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಚಂದ್ರಿಕಾಳ ಚಿಕ್ಕಪ್ಪ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ತಂದೆಗಾಗಿ ಹುಡುಕಾಟ ನಡೆಯುತ್ತಿದೆ.