ಪುರಿ: ಒಡಿಶಾದ ಪುರಿ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. 86 ವರ್ಷದ ಪಿ. ಲಕ್ಷ್ಮಿ ಎಂಬ ವೃದ್ಧೆಯನ್ನು ಮೃತಪಟ್ಟಿದ್ದಾರೆಂದು ಭಾವಿಸಿ ಕುಟುಂಬಸ್ಥರು ಪುರಿಯ ಸ್ವರ್ಗದ್ವಾರ ದಹನಸ್ಥಳದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ, ಆ ವೃದ್ಧೆ ಎದ್ದು ಕುಳಿತಿದ್ದಾರೆ!
ಆಂಧ್ರಪ್ರದೇಶ ಮೂಲದ ಪಿ. ಲಕ್ಷ್ಮಿ, ಗಂಜಾಮ್ ಜಿಲ್ಲೆಯ ತಮ್ಮ ಅಳಿಯನ ಮನೆಗೆ ಭೇಟಿ ನೀಡಿದ್ದ ವೇಳೆ ತೀವ್ರವಾಗಿ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆಯ ನಂತರ ಅವರು ಮೃತಪಟ್ಟಿದ್ದಾರೆಂದು ಘೋಷಿಸಿದ ವೈದ್ಯರು, ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದರೆ. ಆದರೆ, ಸಾವಿಗೆ ಸಂಬಂಧಿಸಿದ ಪ್ರಮಾಣಪತ್ರವನ್ನು ಕುಟುಂಬಕ್ಕೆ ನೀಡಿರಲಿಲ್ಲ.
ಲಕ್ಷ್ಮಿ ಮೃತರಾಗಿದ್ದಾರೆ ಎಂದೇ ನಂಬಿದ ಕುಟುಂಬಸ್ಥರು ನಂತರ ಅಂತ್ಯಕ್ರಿಯೆಗೆ ಪುರಿಗೆ ಕರೆದುಕೊಂಡು ಬಂದು ಎಲ್ಲಾ ಅಂತಿಮ ವಿಧಿ ವಿಧಾನಗಳಿಗೆ ಸಿದ್ಧತೆ ನಡೆಸಿದರು.
ಕೊನೇ ಕ್ಷಣದಲ್ಲಿ ಅಜ್ಜಿ ಜೀವಂತ
ಕುಟುಂಬಸ್ಥರು ಮತ್ತು ಪೂಜಾರಿಗಳು ಅಂತಿಮ ವಿಧಿ ನಡೆಸುತ್ತಿದ್ದಾಗ, ದಹನಸ್ಥಳದ ಒಬ್ಬ ಭದ್ರತಾ ಕಾರ್ಯದರ್ಶಿ ಲಕ್ಷ್ಮಿಯವರ ದೇಹದಲ್ಲಿ ಸ್ವಲ್ಪ ಚಲನವಲನ ಮತ್ತು ಉಸಿರಾಟದ ಸೂಚನೆ ಕಂಡುಬಂದಿದ್ದಾಗಿ ತಿಳಿಸಿದರು. ಹತ್ತಿರದಿಂದ ಪರಿಶೀಲಿಸಿದಾಗ ಲಕ್ಷ್ಮಿ ಅವರು ಇನ್ನೂ ಉಸಿರಾಡುತ್ತಿರುವುದು ದೃಢಪಟ್ಟಿತು. ತಕ್ಷಣವೇ ಅವರನ್ನು ಪುರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು.
“ಅವರ ಹೃದಯ ಕಾರ್ಯನಿರ್ವಹಿಸುತ್ತಿದ್ದರೂ ಮೆದುಳು ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ,” ಎಂದು ವೈದ್ಯರು ತಿಳಿಸಿದ್ದಾರೆ.
ದಹನಸ್ಥಳದ ನಿಯಮಗಳು ಬಯಲಾಯಿತೇ?
ದಹನ ಪ್ರಕ್ರಿಯೆಗೆ ಮೊದಲು ಆಧಾರ್ ಕಾರ್ಡ್ ಹಾಗೂ ಸಾವಿನ ಪ್ರಮಾಣ ಪತ್ರ ಕಡ್ಡಾಯ. ಕುಟುಂಬವು ಸಾವಿನ ಪ್ರಮಾಣ ಪತ್ರ ತರುವಲ್ಲಿ ವಿಳಂಬ ಮಾಡುತ್ತಿದ್ದುದರಿಂದ ದಹನ ತಡವಾಯಿತು. ಅದೇ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಮಹಿಳೆಯ ಉಸಿರಾಟವನ್ನು ಗಮನಿಸಿದ ಕಾರಣ ಅವರ ಪ್ರಾಣ ಉಳಿಯಿತು ಎಂದು ಸ್ವರ್ಗದ್ವಾರ ದಹನಸ್ಥಳದ ವ್ಯವಸ್ಥಾಪಕ ಬ್ರಜ ಕಿಶೋರ್ ಸಾಹು ಹೇಳಿದ್ದಾರೆ.



















