ಅಹಮದಾಬಾದ್: ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ವ್ಯಕ್ತಿಯೊಬ್ಬನನ್ನು ಕೊಂದು ತಾನೇ ಮೃತಪಟ್ಟಿರುವುದಾಗಿ ಬಿಂಬಿಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಮಲಯಾಳಂನ “ದೃಶ್ಯಂ” ಸಿನಿಮಾವೇ ತನ್ನ ಈ ಕೃತ್ಯಕ್ಕೆ ಪ್ರೇರಣೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಘಟನೆ ಸಂಬಂಧ 21 ವರ್ಷದ ಗೀತಾ ಅಹಿರ್ ಮತ್ತು 21 ವರ್ಷದ ಭರತ್ ಅಹಿರ್ ಎಂಬವರನ್ನು ಪಲಾಂಪುರ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರೂ ಸೇರಿ ಕೊಂದಿರುವ ಮಧ್ಯ ವಯಸ್ಕನ ಮೃತದೇಹವು ಪಟಾನ್‌ನ ಜಖೋತ್ರಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆಗಿದ್ದೇನು?
ಆರೋಪಿ ಗೀತಾ ತನ್ನ ಪತಿಯೊಂದಿಗೆ ಜಖೋತ್ರಾ ಗ್ರಾಮದಲ್ಲಿ ನೆಲೆಸಿದ್ದಳು. ಆಕೆಗೆ ಭರತ್ ಎಂಬಾತನ ಜೊತೆಗೆ ಸ್ನೇಹ ಬೆಳೆದಿತ್ತು. ಇಬ್ಬರೂ ಮನೆಯಿಂದ ಓಡಿಹೋಗಿ ಬೇರೆ ಕಡೆ ನೆಲೆಸಲು ಯೋಜಿಸುತ್ತಿದ್ದರು. ಆದರೆ, ಮನೆ ಬಿಟ್ಟು ಹೋಗುವ ಮುನ್ನ ತಾನೇ ಸತ್ತಿರುವುದಾಗಿ ನಾಟಕ ಮಾಡಿದರೆ ಸಮಸ್ಯೆಯಿರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದ ಗೀತಾ, ಅದಕ್ಕಾಗಿ ಒಂದು ಮೃತದೇಹವನ್ನು ವ್ಯವಸ್ಥೆ ಮಾಡಲು ಸಂಚು ರೂಪಿಸಿದ್ದಳು. ಅದರಂತೆ, ಇಬ್ಬರೂ ಸೇರಿ ಊರು ಕೇರಿಯಿಲ್ಲದ ಅಲೆಮಾರಿಯೊಬ್ಬನನ್ನು ಕೊಂದು, ಆತನ ದೇಹಕ್ಕೆ ಗೀತಾಳ ವಸ್ತ್ರ ಹಾಗೂ ಗೆಜ್ಜೆಯನ್ನು ಧರಿಸಿ, ಮೃತದೇಹವನ್ನು ಸುಟ್ಟು ಕೆರೆಯೊಂದಕ್ಕೆ ಬಿಸಾಕಿ ಪರಾರಿಯಾಗಿದ್ದರು. ಮೃತ ವ್ಯಕ್ತಿಯನ್ನು 56 ವರ್ಷದ ಹರ್ಜಿಭಾಯಿ ಸೋಲಂಕಿ ಎಂದು ಗುರುತಿಸಲಾಗಿದೆ.
ಸಂಚು ಬಯಲಾಗಿದ್ದು ಹೇಗೆ?
ಮಂಗಳವಾರ ರಾತ್ರಿ ಎಲ್ಲರೂ ನಿದ್ರೆಗೆ ಜಾರಿದ್ದಾಗ ಗೀತಾ ಮನೆ ತೊರೆದು ಬಂದಿದ್ದಳು. ಮನೆಯಲ್ಲಿ ಗೀತಾ ನಾಪತ್ತೆಯಾಗಿರುವುದನ್ನು ನೋಡಿ ಪತಿ ಹಾಗೂ ಕುಟುಂಬದ ಇತರೆ ಸದಸ್ಯರು ಎಲ್ಲೆಡೆ ಶೋಧ ನಡೆಸುತ್ತಿದ್ದಾಗ ಗ್ರಾಮದ ಹೊರಭಾಗದಲ್ಲಿರುವ ಕೆರೆಯೊಂದರಲ್ಲಿ ಅರ್ಧ ಸುಟ್ಟ ಮೃತದೇಹವೊಂದು ಪತ್ತೆಯಾಗಿತ್ತು. ಆ ಮೃತದೇಹದಲ್ಲಿ ಗೀತಾ ಧರಿಸಿದ್ದ ಘಾಘ್ರಾ(ಸಾಂಪ್ರದಾಯಿಕ ಲಂಗ-ದಾವಣಿ) ಮತ್ತು ಅವಳ ಗೆಜ್ಜೆಯೂ ಇದ್ದ ಕಾರಣ, ಇದು ಆಕೆಯದ್ದೇ ಮೃತದೇಹ ಎಂದು ಕುಟುಂಬ ಸದಸ್ಯರು ನಿರ್ಧರಿಸಿದರು. ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆಂದು ಮನೆಗೆ ತಂದ ಬಳಿಕಲೇ ಅದು ಪುರುಷನ ಮೃತದೇಹ ಎಂಬುದು ಕುಟುಂಬ ಸದಸ್ಯರಿಗೆ ಗೊತ್ತಾಯಿತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಹೀಗಾಗಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಯಿತು.
ಪ್ರಕರಣದ ಜಾಡು ಹತ್ತಿದ ಪೊಲೀಸರು, ರಾಜಸ್ಥಾನಕ್ಕೆ ಹೋಗಲು ರೆಡಿಯಾಗಿ ನಿಂತಿದ್ದ ಗೀತಾ ಮತ್ತು ಭರತ್‌ನನ್ನು ರೈಲು ನಿಲ್ದಾಣದಲ್ಲಿ ಬಂಧಿಸಿದರು. ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿಬಿಟ್ಟರು. ಮೇ 26ರಂದು ನಾನು ಪೇಟೆಗೆ ಹೋಗಲು ಹೊರಟಿದ್ದಾಗ ನನಗೆ ಸೋಲಂಕಿ ಬೈಕ್‌ನಲ್ಲಿ ಡ್ರಾಪ್ ಮಾಡುವ ಮೂಲಕ ಸಹಾಯ ಮಾಡಿದ್ದ. ನಂತರ ಭರತ್ ಕೂಡ ಸೋಲಂಕಿ ಜತೆ ಮಾತನಾಡಿ ಸ್ನೇಹ ಬೆಳೆಸಿಕೊಂಡ. ನಮ್ಮ ಸಂಚಿಗೆ ಆತನನ್ನೇ ಬಲಿ ಪಡೆಯಬಹುದು ಎಂದು ನಾವು ನಿರ್ಧರಿಸಿದೆವು. ಅದರಂತೆ, ಮಂಗಳವಾರ ರಾತ್ರಿ ಸೋಲಂಕಿಯನ್ನು ಗ್ರಾಮದ ಹೊರಭಾಗಕ್ಕೆ ಕರೆಸಿಕೊಂಡ ಭರತ್, ಅವನ ಕತ್ತುಹಿಸುಕಿ ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಕೆರೆಯ ಬಳಿ ಹೊತ್ತೊಯ್ದ. ಮನೆ ತೊರೆದು ಅಲ್ಲಿಗೆ ಬಂದ ನಾನು, ಬರುವಾಗಲೇ ಒಂದು ಬಾಟಲಿ ಪೆಟ್ರೋಲ್ ಅನ್ನೂ ಹೊತ್ತುತಂದಿದ್ದೆ. ಮೊದಲಿಗೆ ನಾವು ಸೋಲಂಕಿಯ ಮೃತದೇಹಕ್ಕೆ ನನ್ನ ಉಡುಗೆಯನ್ನು ಹಾಗೂ ಕಾಲ್ಗೆಜ್ಜೆಯನ್ನು ತೊಡಿಸಿದೆವು. ಬಳಿಕ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದೆವು. ನಂತರ ಕೆರೆಗೆ ಬಿಸಾಕಿ, ಅಲ್ಲಿಂದ ಪರಾರಿಯಾದೆವು. ರೈಲಿನ ಮೂಲಕ ಜೋಧ್ಪುರಕ್ಕೆ ತೆರಳಲು ನಾವು ನಿರ್ಧರಿಸಿದ್ದೆವು. ಆದರೆ ಅಷ್ಟರಲ್ಲಿ ಪೊಲೀಸರು ನಮ್ಮನ್ನು ಸೆರೆಹಿಡಿದರು ಎಂದು ಗೀತಾ ಹೇಳಿಕೊಂಡಿದ್ದಾಳೆ.