ಮಧುರೈ : ಕಳೆದ ಡಿಸೆಂಬರ್‌ನಲ್ಲಿ ಮಧುರೈನ LIC ಕಚೇರಿಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಸಜೀವ ದಹನವಾಗಿದ್ದ ಪ್ರಕರಣ ಈಗ ಬೆಚ್ಚಿಬೀಳಿಸುವ ತಿರುವು ಪಡೆದುಕೊಂಡಿದೆ. ಇದು ಕೇವಲ ಆಕಸ್ಮಿಕ ಅಪಘಾತವಲ್ಲ, ಬದಲಿಗೆ ಹಿರಿಯ ಅಧಿಕಾರಿಯೊಬ್ಬರು ತನ್ನ ಸಹೋದ್ಯೋಗಿಯಿಂದಲೇ ಕೊಲೆಯಾಗಿದ್ದಾರೆ ಎಂಬ ಅಂಶವನ್ನು ತಮಿಳುನಾಡು ಪೊಲೀಸರು ಬಯಲಿಗೆಳೆದಿದ್ದಾರೆ. ಈ ಸಂಬಂಧ ಮೃತ ಅಧಿಕಾರಿಯ ಸಹೋದ್ಯೋಗಿ ರಾಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಬಯಲಿಗೆಳೆದಿದ್ದೇ ಸಾವಿಗೆ ಕಾರಣ
ಮಧುರೈನ ವೆಸ್ಟ್ ಪೆರುಮಾಳ್ ಮೇಸ್ತ್ರಿ ಬೀದಿಯಲ್ಲಿರುವ ಎಲ್‌ಐಸಿ ಕಚೇರಿಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿದ್ದ 54 ವರ್ಷದ ಕಲ್ಯಾಣಿ ನಂಬಿ ಅವರು ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿದ್ದರು. ಮೊದಲು ಎಸಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಭಾವಿಸಲಾಗಿತ್ತು. ಆದರೆ, ತನಿಖೆಯ ವೇಳೆ ಕಲ್ಯಾಣಿ ನಂಬಿ ಅವರು ವಿಮಾ ಕ್ಲೈಮ್‌ಗಳ ಇತ್ಯರ್ಥದಲ್ಲಿ ನಡೆಯುತ್ತಿದ್ದ ದೊಡ್ಡ ಮಟ್ಟದ ಅಕ್ರಮಗಳನ್ನು ಪತ್ತೆಹಚ್ಚಿದ್ದರು ಎಂಬುದು ತಿಳಿದುಬಂದಿದೆ. ಈ ಅಕ್ರಮಗಳಲ್ಲಿ ಭಾಗಿಯಾಗಿದ್ದ ಸಹೋದ್ಯೋಗಿ ರಾಮ್ ವಿರುದ್ಧ ಕ್ರಮಕ್ಕೆ ಅವರು ಮುಂದಾಗಿದ್ದರು. ತನ್ನ ವಿರುದ್ಧ ಕ್ರಮ ಜರುಗಿಸುವುದನ್ನು ತಡೆಯಲು ಮತ್ತು ತನ್ನ ಅಕ್ರಮಗಳನ್ನು ಮುಚ್ಚಿ ಹಾಕಲು ರಾಮ್, ಕಲ್ಯಾಣಿ ಅವರ ಕ್ಯಾಬಿನ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗನಿಗೆ ಕರೆ ಮಾಡಿ ಆತಂಕ ವ್ಯಕ್ತಪಡಿಸಿದ್ದ ಅಧಿಕಾರಿ
ಈ ಪ್ರಕರಣವು ಬೆಳಕಿಗೆ ಬರಲು ಮೃತ ಕಲ್ಯಾಣಿ ಅವರ ಮಗ ನೀಡಿದ ದೂರು ಪ್ರಮುಖ ಕಾರಣವಾಯಿತು. ಬೆಂಕಿ ಹೊತ್ತಿಕೊಳ್ಳುವ ಕೆಲವೇ ನಿಮಿಷಗಳ ಮೊದಲು ಕಲ್ಯಾಣಿ ಅವರು ಮಗನಿಗೆ ಕರೆ ಮಾಡಿದ್ದರು. ತಾನು ಸಂಕಷ್ಟದಲ್ಲಿದ್ದೇನೆ ಎಂದು ಗಾಬರಿಯಿಂದ ತಿಳಿಸಿದ್ದ ಅವರು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮಗನಲ್ಲಿ ಕೇಳಿಕೊಂಡಿದ್ದರು. ಅಲ್ಲದೆ, ಕಚೇರಿಯ ಅವಧಿಯಲ್ಲಿ ಸಾಮಾನ್ಯವಾಗಿ ತೆರೆದಿರಬೇಕಾದ ಕ್ಯಾಬಿನ್ ಬಾಗಿಲನ್ನು ಹೊರಗಿನಿಂದ ಚೈನ್ ಹಾಕಿ ಲಾಕ್ ಮಾಡಲಾಗಿತ್ತು. ಇದು ಪೊಲೀಸರ ಅನುಮಾನವನ್ನು ಬಲಪಡಿಸಿತು.
ಆರೋಪಿಯ ಕಪಟ ನಾಟಕ ಬಯಲು
ಕೊಲೆ ಆರೋಪಿ ರಾಮ್, ತನಿಖೆಯ ಆರಂಭದಲ್ಲಿ ಪೊಲೀಸರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲು ಯತ್ನಿಸಿದ್ದ. ತನಗೂ ಬೆಂಕಿಯಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ಅದು ಆಕಸ್ಮಿಕ ಎಂದು ಬಿಂಬಿಸಲು ಪ್ರಯತ್ನಿಸಿದ್ದ. ಆದರೆ ಪೊಲೀಸರ ವಿಚಾರಣೆಯ ವೇಳೆ ಆತ ನೀಡಿದ ಹೇಳಿಕೆಗಳಲ್ಲಿ ಪರಸ್ಪರ ವಿರೋಧಾಭಾಸಗಳು ಕಂಡುಬಂದಿದ್ದವು. ತೀವ್ರ ವಿಚಾರಣೆಯ ನಂತರ, ಕಲ್ಯಾಣಿ ನಂಬಿ ಅವರನ್ನು ಕ್ಯಾಬಿನ್ ಒಳಗೆ ಹಾಕಿ ಬೆಂಕಿ ಹಚ್ಚಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.
ತಿರುನಲ್ವೇಲಿಯಿಂದ ಮಧುರೈಗೆ ವರ್ಗಾವಣೆಯಾಗಿದ್ದ ಪ್ರಾಮಾಣಿಕ ಅಧಿಕಾರಿಯೊಬ್ಬರು ಅಕ್ರಮಗಳನ್ನು ಪ್ರಶ್ನಿಸಿದ್ದಕ್ಕೆ ಪ್ರಾಣ ಕಳೆದುಕೊಂಡಿರುವುದು ಎಲ್‌ಐಸಿ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ. ಇದು ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಸುರಕ್ಷತೆ ಮತ್ತು ಭ್ರಷ್ಟಾಚಾರವನ್ನು ಪ್ರಶ್ನಿಸುವ ‘ವಿಸ್ಸಲ್ ಬ್ಲೋವರ್'(ಮಾಹಿತಿದಾರರು)ಗಳ ರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಇದನ್ನೂ ಓದಿ : ಅಮೆರಿಕ-ಇರಾನ್ ಯುದ್ಧೋನ್ಮಾದ | ನನ್ನ ಮೇಲೆ ಹಲ್ಲೆಯಾದರೆ ಇರಾನ್ ಸರ್ವನಾಶ – ಟ್ರಂಪ್ ಎಚ್ಚರಿಕೆ!



















