ಕೋಲಾರ: ಸಿಎಂ ಸಿದ್ದರಾಮಯ್ಯ ವಿರುದ್ಧ ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಮುಗಿ ಬೀಳುತ್ತಿವೆ. ಈ ಮಧ್ಯೆ ಬಿಜೆಪಿ ಮುಖಂಡ ವರ್ತೂರ್ ಪ್ರಕಾಶ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ.
ಕೋಲಾರದಲ್ಲಿ ನಡೆದ ಕನದಾಸರ ಜಯಂತಿ ಸಂದರ್ಭದಲ್ಲಿ ಮಾತನಾಡಿದ ಅವರು, ಕಲಿಯುಗದಲ್ಲಿ ಧರ್ಮದ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ ಸಿಎಂ ಗೆಲ್ಲುತ್ತಾರೆ ಎಂದು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ.
Without ಸಿದ್ದರಾಮಯ್ಯ there is ನೋ ಕಾಂಗ್ರೆಸ್. ನಾವೆಲ್ಲಾ ಸಿದ್ದರಾಮಯ್ಯ ಪರ ಹೋರಾಟ ಮಾಡಬೇಕು. ನಾನು ಜಾತಿ ಪ್ರೇಮಿ. ಆದರೆ ನಾನು ಕಾಂಗ್ರೆಸ್ ಸೇರಲ್ಲ. ಮುಡಾ ಸಂಬಂಧ ಲೋಕಾಯುಕ್ತ ವಿಚಾರಣೆಯಲ್ಲೂ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಗುತ್ತದೆ. ಸಿದ್ದರಾಮಯ್ಯ ಅವರ ಪತ್ನಿ ನಮ್ಮ ತಾಯಿ ಇದ್ದಂತೆ. ಸಿದ್ದರಾಮಯ್ಯ ಪತ್ನಿ ಮೇಲೆ ಕೇಸ್ ಹಾಕಿದ್ದಕ್ಕೆ ನನಗೆ ಕೋಪ ಬಂದಿದೆ ಎಂದು ವರ್ತೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಿಎಂ ಬೆನ್ನಿಗೆ ಕುರುಬ ಸಮಾಜದವರು ನಿಲ್ಲುವಂತೆ ಪರೋಕ್ಷವಾಗಿ ಕರೆ ನೀಡಿದ್ದಾರೆ.
ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದರೆ ಬೇಸರವಿಲ್ಲ. ಅವರು ರಾಜಕಾರಣದಲ್ಲಿದ್ದಾರೆ. ಹಿರಿಯ ರಾಜಕಾರಣಿ. ಅವರು ಸಿಎಂ ಆಗಲಿ ಎಂದು ನಾನು ಬಯಸಿದ್ದೆ. ಆದರೆ, ಈಗ ಅವರ ಮೇಲೆ ಬಂದಿರುವ ಆರೋಪ ಮಾತ್ರ ಸುಳ್ಳು. ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಹೀಗಾಗಿ ನಮ್ಮ ಕ್ಷೇತ್ರದಲ್ಲಿನ 3 ಲಕ್ಷ ಮತದಾರರು ಒಗ್ಗಟ್ಟಾಗಬೇಕು. ಸಿದ್ದರಾಮಯ್ಯ ಅವರ ಬಳಿ ದುಡ್ಡಿಲ್ಲ. ಮನೆಗೆ ರೇಷನ್ ತಂದು ಹಾಕೋದು ದುಡ್ಡಿರುವ ಭೈರತಿ ಸುರೇಶ್ ಅಂಥವರು. ಐದು ವರ್ಷ ಸಿದ್ದರಾಮಯ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಾರೆ. 7 ಕೋಟಿ ಜನರ ಮತ್ತು ಹಿಂದುಳಿದ ವರ್ಗಗಳ ಪ್ರೀತಿ ಸಿಎಂ ಮೇಲಿದೆ ಎಂದು ಹೇಳಿದ್ದಾರೆ.