ಬೆಂಗಳೂರು: ಸಾಮಾಜಿಕ ಜಾಲತಾಣಗಳು ಈಗ ಪ್ರಭಾವಿ ಮಾಧ್ಯಮಗಳಾಗಿವೆ. ಪ್ರತಿಯೊಬ್ಬರೂ ಈಗ ಜಾಲತಾಣಗಳ ಮೂಲಕವೇ ಪ್ರತಿಯೊಂದು ಮಾಹಿತಿಯನ್ನು ಪಡೆಯುತ್ತಾರೆ. ಕೆಲವರು ಸರಿಯಾದ ಮಾಹಿತಿಯನ್ನು ಹರಡಿದರೆ, ಇನ್ನೂ ಕೆಲವರು ನಕಲಿ ಸುದ್ದಿ, ವದಂತಿಗಳನ್ನು ಹರಡಿಸುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಸೆಪ್ಟೆಂಬರ್ 30ರ ಬಳಿಕ ದೇಶದ ಎಟಿಎಂಗಳಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳು ಸಿಗುವುದಿಲ್ಲ ಎಂಬ ಮಾಹಿತಿ ಹರಡಿಸಲಾಗಿದೆ.
ಎಟಿಎಂಗಳಲ್ಲಿ 500 ರೂಪಾಯಿ ನೋಟುಗಳು ಸಿಗುವುದಿಲ್ಲ ಎಂದು ವಾಟ್ಸ್ ಆ್ಯಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗುತ್ತಿರುವ ಪೋಸ್ಟ್ ನಲ್ಲಿ ಸೆಪ್ಟೆಂಬರ್ ನಿಂದ 500 ರೂಪಾಯಿ ನೋಟುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ 30, 2025 ರ ನಂತರ ಎಟಿಎಂಗಳಲ್ಲಿ 500 ರೂ. ಮುಖಬೆಲೆ ನೋಟು ತುಂಬಿಸೋದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿದೆ ಎಂಬ ಮಾಹಿತಿಯನ್ನು ವೈರಲ್ ಪೋಸ್ಟ್ ಒಳಗೊಂಡಿದೆ.
ಸರ್ಕಾರ ಹೇಳಿದ್ದಿಷ್ಟು
ವೈರಲ್ ಆಗುತ್ತಿರುವ ಪೋಸ್ಟ್ ಕುರಿತು ಸರ್ಕಾರ ಸ್ಪಷ್ಟನೆ ನೀಡಿದ್ದು, ಇದು ವದಂತಿ ಎಂದು ತಿಳಿಸಿದೆ. 500 ರೂ. ಮುಖಬೆಲೆ ಕುರಿತು ಹರಿದಾಡುತ್ತಿರುವ ಪೋಸ್ಟ್ ಸುಳ್ಳು ಮಾಹಿತಿಯನ್ನು ಒಳಗೊಂಡಿದೆ ಎಂದು PIB ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದೆ. RBI ಬ್ಯಾಂಕ್ ಗಳಿಗೆ ಈ ರೀತಿಯಲ್ಲಿ ಯಾವುದೇ ನಿರ್ದೇಶನ ನೀಡಿಲ್ಲ. ಈ ನಕಲಿ ಸುದ್ದಿಗಳಿಗೆ ಸಾರ್ವಜನಿಕರು ಗಮನ ಕೊಡಬಾರದು. ಸರ್ಕಾರಿ ಮೂಲಗಳಿಂದ ಸಿಗುವ ಮಾಹಿತಿಯನ್ನು ಮಾತ್ರ ನಂಬಬೇಕೆಂದು ಪಿಐಬಿ ತಿಳಿಸಿದೆ.
ದೇಶದಲ್ಲಿ 500 ರೂಪಾಯಿ ನೋಟುಗಳು ಮಾನ್ಯವಾಗಿರುತ್ತವೆ. ಮೊದಲಿನಂತೆಯೇ ಮುಂದೆಯೂ 500 ರೂ. ನೋಟುಗಳ ಮೂಲಕ ಸಾರ್ವಜನಿಕರು ವ್ಯವಹರಿಸಬಹುದಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವಂತಿಲ್ಲ ಪಿಐಬಿ ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 30, 2025 ರ ವೇಳೆಗೆ ಎಟಿಎಂಗಳಲ್ಲಿ ಶೇ. 75 ರಷ್ಟು ನೋಟುಗಳು 100-200 ರೂ.ಗಳಾಗಿರಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶಿಸಿದೆ. ಇದನ್ನು ಇಟ್ಟುಕೊಂಡೇ ಕೆಲವರು ನಕಲಿ ಸುದ್ದಿ ಹರಡಿಸಿದ್ದಾರೆ.



















