ಪಾಕಿಸ್ತಾನ್ ಕ್ಕೆ ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ತಂಡ ತೆರಳುವುದಿಲ್ಲ ಎಂದು ಈಗಾಗಲೇ ಭಾರತ ಸ್ಪಷ್ಟವಾಗಿ ಹೇಳಿದೆ. ಆದರೆ, ಈಗ ಪಾಕಿಸ್ತಾನ್ ತಂಡವೇ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಭಾರತ ತಂಡವು ಟೂರ್ನಿಯಲ್ಲಿ ಭಾಗವಹಿಸಲು ಪಾಕಿಸ್ತಾನ್ ಹೋಗಲು ನಿರಾಕರಿಸಿದ್ದಕ್ಕೆ ಪಿಸಿಬಿ ಈ ನಿರ್ಧಾರ ಕೈಗೊಂಡಿದೆ ಎಂದು ವರದಿ ಹೇಳಿದೆ. ಭಾರತ ನಿರಾಕರಿಸಿದ ವಿಷಯವನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್, ಪಾಕ್ ಸರ್ಕಾರದ ಮುಂದೆ ಪ್ರಸ್ತಾಪಿಸಿದೆ. ಈ ವೇಳೆ ಅಲ್ಲಿನ ಸರ್ಕಾರ ಟೂರ್ನಿಯಿಂದ ಹಿಂದೆ ಸರಿಯುವ ಬಗ್ಗೆ ಚರ್ಚಿಸಿದೆ ಎನ್ನಲಾಗಿದೆ.
ಭಾರತವು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದರೆ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯಲು ಪಾಕ್ ಸರ್ಕಾರ ಸೂಚಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸದ್ಯದ ಸ್ಥಿತಿಯಲ್ಲಿ ಐಸಿಸಿ ಭಾರತದ ಪರ ನಿಲ್ಲುವ ಸಾಧ್ಯತೆ ಹೆಚ್ಚು. ಅಲ್ಲದೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಸೂಚಿಸಬಹುದು. ಹೀಗಾಗಿ ಪಾಕಿಸ್ತಾನ್ ಹಿಂದೆ ಸರಿಯುವ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಪಾಕಿಸ್ತಾನ್ ತಂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದರೆ, ಬೇರೊಂದು ದೇಶಕ್ಕೆ ಆತಿಥ್ಯದ ಹಕ್ಕು ಸಿಗಲಿದೆ. ಈ ಆತಿಥ್ಯದ ಹಕ್ಕು ಬಿಸಿಸಿಐ ಪಾಲಾಗುವ ಸಾಧ್ಯತೆಯೂ ಇದೆ. ಒಂದು ವೇಳೆ ಪಾಕಿಸ್ತಾನ್ ಚಾಂಪಿಯನ್ಸ್ ಟ್ರೋಫಿ ಆಯೋಜಿಸಬೇಕಿದ್ದರೆ, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ನಡೆಸಲೇಬೇಕು. ಆದರೆ, ಅಂತಿಮವಾಗಿ ಏನಾಗಲಿದೆ ಎಂಬುವುದು ಸದ್ಯದಲ್ಲೇ ತಿಳಿಯಲಿದೆ.