ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ 20 ವರ್ಷ ವಯಸ್ಸಿನ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ದಾಳಿ ನಡೆಸಿರುವ ಸುದ್ದಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ.
ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಚುನಾವಣಾ ಪ್ರಚಾರ ಸಮಾವೇಶದ ಸಂದರ್ಭದಲ್ಲಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಹಾರಿಸಿದ ಗುಂಡು ಟ್ರಂಪ್ ಕಿವಿ ಸೀಳಿದೆ. ಘಟನೆಯಲ್ಲಿ ಟ್ರಂಪ್ ಬದುಕುಳಿದಿದ್ದಾರೆ. ಈ ಮೂಲಕ ಕೂದಲೆಳೆ ಅಂತರದಲ್ಲಿ ಟ್ರಂಪ್ ಜೀವ ಉಳಿದಿದೆ.
ಟ್ರಂಪ್ ಅವರ ಕಿವಿಗೆ ಗಾಯಗೊಳಿಸಿದ ಬಳಿಕ ಮನಬಂದಂತೆ ಗುಂಡು ಹಾರಿಸಿದ್ದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್, 50 ವರ್ಷ ವಯಸ್ಸಿನ ಓರ್ವ ವ್ಯಕ್ತಿಯ ಸಾವಿಗೆ ಹಾಗೂ ಇಬ್ಬರು ಗಾಯಗೊಳ್ಳಲು ಕಾರಣನಾಗಿದ್ದಾನೆ. ಕೂಡಲೇ ಕ್ರೂಕ್ಸ್‌ನನ್ನ ಹುಡುಕಿದ ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಗುಂಡಿಟ್ಟು ಕೊಂದು ಹಾಕಿವೆ. ಹೀಗಾಗಿ ಆತನ ಸಾವಿನ ನಂತರ ಹಲವು ಸಂಶಯಗಳು ಹಾಗೂ ರಹಸ್ಯಗಳು ಉಳಿದು ಹೋಗಿವೆ.
ಥಾಮಸ್ ಮ್ಯಾಥ್ಯೂ ಕ್ರೂಕ್ಸ್‌ನ ತಂದೆ ಖರೀದಿಸಿದ್ದ ಆರ್ – 15 ಬಂದೂಕಿನಿಂದ ಟ್ರಂಪ್ ಮೇಲೆ ದಾಳಿ ನಡೆದಿದೆ. ದಾಳಿಕೋರನನ್ನು ಹತ್ಯೆ ಮಾಡಿದ ನಂತರ ಪೊಲೀಸರು ಆತನ ವಾಹನವನ್ನ ಜಾಲಾಡಿದಾಗ ಅದರಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸಿಕ್ಕಿವೆ.
ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ಹಾಗೂ ಹತ್ಯೆ ಯತ್ನ ನಡೆದ ಕೂಡಲೇ ಈ ಘಟನೆಗೆ ರಾಜಕೀಯ ತಿರುವು ಸಿಕ್ಕಿತ್ತು. ಆದರೆ, ಟ್ರಂಪ್ ಮೇಲೆ ದಾಳಿ ನಡೆಸಿದವರು ವಿರೋಧ ಪಕ್ಷವಾದ ಡೆಮಾಕ್ರೆಟಿಕ್ ಪಕ್ಷದವನಲ್ಲ. ಆತ ಕೂಡ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಸದಸ್ಯ. ಆದರೆ ವೃತ್ತಿಯಲ್ಲಿ ನರ್ಸಿಂಗ್ ಹೋಂನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಆತನಿಗೆ ಯಾವುದೇ ಅಪರಾಧಿ ಹಿನ್ನೆಲೆ ಇರಲಿಲ್ಲ. ಆತ ಅಂತರ್ಮುಖಿ ಸ್ವಭಾವದವನು ಎಂದು ಸ್ನೇಹಿತರು ಹೇಳುತ್ತಾರೆ.
ಥಾಮಸ್ ಮ್ಯಾಥ್ಯೂ ಕ್ರೂಕ್ಸ್‌ನ ವರ್ತನೆ ಸಹಪಾಠಿಗಳಿಗೆ ಕಿರಿಕಿರಿಯಾಗಿ ಕಾಣುತ್ತಿದ್ದವು. ವರ್ಣಭೇದ ಮಾಡುವ ಜೋಕ್‌ಗಳನ್ನ ಹೇಳುತ್ತಿದ್ದ ಕ್ರೂಕ್ಸ್‌ಗೆ ಬಂದೂಕಿನಲ್ಲಿ ಗುರಿ ಇಡೋಕೇ ಬರುತ್ತಿರಲಿಲ್ಲ. ಹೀಗಾಗಿ ಆತನನ್ನು ಶಾಲೆಯ ರೈಫಲ್ ಟೀಂನಿಂದ ಹೊರಗೆ ಇಡಲಾಗಿತ್ತು ಎಂದು ಸ್ನೇಹಿತರು ಹೇಳುತ್ತಿದ್ದಾರೆ.