ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿ ದರ್ಶನ್ (Darshan) ಮತ್ತೆ ಎರಡು ದಿನ ಪೊಲೀಸ್ ಕಸ್ಟಡಿಯಲ್ಲಿ ಇರುವಂತಾಗಿದೆ.
ಈಗಾಗಲೇ ಕಳೆದ ಹತ್ತು ದಿನಗಳಿಂದ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈಗ ಮತ್ತೆ ನಾಲ್ಕು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ದರು. ಆದರೆ ನ್ಯಾಯಾಲಯವು ಎರಡು ದಿನಗಳ ಕಾಲ ಕಸ್ಟಡಿಗೆ ನೀಡಿದೆ. ದರ್ಶನ್ ಸೇರಿದಂತೆ ನಾಲ್ವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ A2 ದರ್ಶನ್, A9 ಧನರಾಜ್, A10 ವಿನಯ್ ಹಾಗೂ A14 ಪ್ರದೋಶ್ ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆ ಮಾಡಿ ನ್ಯಾಯಾಲಯ ಆದೇಶ ನೀಡಿದೆ. ಜೂನ್ 22ರಂದು ಸಂಜೆ ಐದು ಗಂಟೆಯ ಒಳಗಾಗಿ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.
ಈ ಸಂದರ್ಭದಲ್ಲಿ ದರ್ಶನ್ ಹಾಗೂ ಉಳಿದವರನ್ನು ಕಸ್ಟಡಿಗೆ ಪಡೆಯಲು ಕೆಲವು ಕಾರಣಗಳನ್ನು ಪೊಲೀಸರು ನೀಡಿದ್ದರು. ಪ್ರಕರಣದಲ್ಲಿ ಪ್ರತ್ಯಕ್ಷ್ಯ ಸಾಕ್ಷಿ ಇದ್ದಾರೆ ಎಂಬುವುದು ಪ್ರಮುಖ ಕಾರಣವಾಗಿತ್ತು. ಪ್ರತ್ಯಕ್ಷ್ಯ ಸಾಕ್ಷಿ ನೀಡಿರುವ ಹೇಳಿಕೆಗಳ ಆಧಾರದಲ್ಲಿ ದರ್ಶನ್ ವಿಚಾರಣೆ ಮಾಡಬೇಕೆಂಬುದು ಪೊಲೀಸರ ವಾದ. ಕೆಲವು ಟೆಕ್ನಿಕಲ್ ಸಾಕ್ಷ್ಯಗಳು, ಉದಾಹರಣೆಗೆ ಮೊಬೈಲ್ ನೆಟ್ವರ್ಕಿಂಗ್, ಎಫ್ಎಸ್ಎಲ್ ವರದಿಗಳು ಇವುಗಳ ವರದಿಗಳ ಆಧಾರದಲ್ಲಿ ವಿಚಾರಣೆ ಮಾಡಬೇಕು ಎಂದು ಪೊಲೀಸರು ಕಾರಣ ನೀಡಿದ್ದಾರೆ. ಶವ ಎಸೆಯಲು ನೀಡಲಾಗಿದ್ದ 37 ಲಕ್ಷ ರೂಪಾಯಿ ಹಣದ ಮೂಲವನ್ನು ಸಹ ಪತ್ತೆ ಮಾಡಬೇಕಿದೆ ಎಂದಿದ್ದಾರೆ.

ಅಲ್ಲದೇ, ಆರೋಪಿ ಧನರಾಜ್, ರೇಣುಕಾ ಸ್ವಾಮಿಯ ಮೊಬೈಲ್ ಹುಡುಕಾಟದಲ್ಲಿ ಸರಿಯಾಗಿ ಸಹಕರಿಸುತ್ತಿಲ್ಲ ಎಂಬ ಕಾರಣವನ್ನು ನೀಡಿದ್ದಾರೆ. ಧನರಾಜ್, ರೇಣುಕಾ ಸ್ವಾಮಿಗೆ ಶಾಕ್ ನೀಡಿದ್ದವ. ಅಲ್ಲದೆ ಹಣ ಪಡೆದು ರೇಣುಕಾ ಸ್ವಾಮಿಯ ಶವ ಸಹ ಸಾಗಿಸಿದ್ದ ಎನ್ನಲಾಗಿದೆ. ಮೊಬೈಲ್ ನ್ನು ಈತನೇ ಮೋರಿಗೆ ಎಸೆದಿದ್ದ ಎನ್ನಲಾಗುತ್ತಿದೆ. ಆದರೆ, ಹುಡುಕಾಟದಲ್ಲಿ ಸಹಕರಿಸುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಪೊಲೀಸರು ಆರೋಪಿಗಳನ್ನು ನಾಲ್ಕು ದಿನಗಳ ಕಾಲ ವಶಕ್ಕೆ ಕೇಳಿದ್ದರು. ಆದರೆ, ದರ್ಶನ್ ಪರ ವಕೀಲರು ತಕರಾರು ಮಾಡಿದ ಹಿನ್ನೆಲೆಯಲ್ಲಿ ಕೋರ್ಟ್ ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
