ಇಂಡೋನೇಷ್ಯಾ: ವ್ಯಕ್ತಿಯೊಬ್ಬ ಮದುವೆ ಯಾವಾಗ ಎಂದು ಪದೇ ಪದೇ ಕೇಳುತ್ತಿದ್ದ ಪಕ್ಕದ ಮನೆಯ ವೃದ್ಧನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
45 ವರ್ಷವಾದರೂ ಇನ್ನೂ ಒಂಟಿಯಾಗಿದ್ದೀರಿ? ಯಾವಾಗ ಮದುವೆ ಎಂದು ಕೇಳುತ್ತಿದ್ದ ವೃದ್ದನನ್ನು ಕೊಲೆ ಮಾಡಿರುವ ಘಟನೆ ಇಂಡೋನೇಷ್ಯಾದ ಉತ್ತರ ಸುಮಾತ್ರಾದಲ್ಲಿ ನಡೆದಿದೆ. ಪದೇ ಪದೇ ಮದುವೆಯ ವಿಷಯ ಎತ್ತಿ ವ್ಯಂಗ್ಯವಾಡುತ್ತಿದ್ದ 60 ವರ್ಷದ ವೃದ್ಧನನ್ನು ಅವಿವಾಹಿತ ವ್ಯಕ್ತಿಯು ಮನೆಯೊಳಗೆ ನುಗ್ಗಿ ಮರದ ದಿಮ್ಮಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ವರದಿಯಂತೆ, ಜುಲೈ 29 ರಂದು ಈ ಘಟನೆ ನಡೆದಿದೆ. ಕೊಲೆಯಾದ ವೃದ್ಧನನ್ನು ಅಸ್ಗಿಮ್ ಇರಿಯಾಂಟೊ ಎಂದು ಗುರುತಿಸಲಾಗಿದೆ. ಅವಿವಾಹಿತ ವ್ಯಕ್ತಿ ಮನೆಯ ಬಾಗಿಲು ಮುರಿದು ಬಂದು ತನ್ನ ಪತಿ ಅಸ್ಗಿಮ್ ಮೇಲೆ ಮರದ ದಿಂಬಿಯಿಂದ ಹೊಡೆದು ಕೊಂದಿದ್ದಾನೆ ಎಂದು ವೃದ್ಧನ ಪತ್ನಿ ಹೇಳಿದ್ದಾರೆ.
45 ವರ್ಷ ವಯಸ್ಸಾದರೂ ಒಂಟಿ ಜೀವನ ನಡೆಸುತ್ತಿದ್ದ ಆರೋಪಿ ಮಾನಸಿಕವಾಗಿ ನೊಂದಿದ್ದ. ಇದಲ್ಲದೇ ಪಕ್ಕದ ಮನೆಯ ವೃದ್ಧ ಪದೇ ಪದೇ ಮದುವೆ ಬಗ್ಗೆ ಕೇಳಿದ್ದರಿಂದ ಮತ್ತಷ್ಟು ನೋವಾಗುತ್ತಿತ್ತು. ಹೀಗಾಗಿ ಕೋಪದ ಭರದಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.