ಬೆಂಗಳೂರು: ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಚೊಚ್ಚಲ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕೆಟ್-ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ, ಒಂದು ವರ್ಷದ ನಂತರ ಮತ್ತೆ ಭಾರತ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಐಪಿಎಲ್‌ನಲ್ಲಿ 15 ಪಂದ್ಯಗಳಿಂದ 37ರ ಸರಾಸರಿಯಲ್ಲಿ ಮತ್ತು 176ರ ಸ್ಟ್ರೈಕ್ ರೇಟ್‌ನಲ್ಲಿ 261 ರನ್ ಗಳಿಸಿದ್ದ ಜಿತೇಶ್ ಅವರ ಈ ಯಶಸ್ಸಿನ ಹಿಂದೆ, ಆರ್‌ಸಿಬಿಯ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ (DK) ಅವರ ಪಾತ್ರ ದೊಡ್ಡದಿದೆ.
ಜಿತೇಶ್ ಅವರ ಪುನರಾಗಮನದ ಬಗ್ಗೆ ಕ್ರಿಕ್‌ಬಝ್ ಜೊತೆ ಮಾತನಾಡಿದ ದಿನೇಶ್ ಕಾರ್ತಿಕ್, ಕೆಲವು ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. “ನನ್ನ ಪ್ರಕಾರ, ಜಿತೇಶ್ ಭಾರತ ತಂಡಕ್ಕಾಗಿ ಆಡಲು ಎಂದಿಗೂ ಹಿಂಜರಿಯಲಿಲ್ಲ. ಬದಲಾಗಿ, ಪಂದ್ಯಗಳನ್ನು ಹೇಗೆ ಫಿನಿಶ್ ಮಾಡಬೇಕು? ತಂಡದ ಮೊತ್ತವನ್ನು ಹೇಗೆ ಹೆಚ್ಚಿಸಬೇಕು? ಎಂಬುದರ ಮೇಲೆ ಅವರು ಗಮನಹರಿಸಿದ್ದರು,” ಎಂದು ಕಾರ್ತಿಕ್ ಹೇಳಿದ್ದಾರೆ.
“ಜಿತೇಶ್ ಅವರು ಸಣ್ಣ ಕ್ಯಾಮಿಯೋಗಳನ್ನು ಆಡುತ್ತಿದ್ದರು, ಆದರೆ ಪಂದ್ಯವನ್ನು ಗೆಲ್ಲಿಸಬಲ್ಲ ಅಥವಾ ತಂಡಕ್ಕೆ ಉತ್ತಮ ಮೊತ್ತವನ್ನು ತಂದುಕೊಡಬಲ್ಲ ದೊಡ್ಡ ಇನ್ನಿಂಗ್ಸ್ ಅನ್ನು ಹೇಗೆ ಆಡಬೇಕೆಂದು ಅವರಿಗೆ ತಿಳಿದಿರಲಿಲ್ಲ. ಅವರಲ್ಲಿ ಅಪಾರ ಸಾಮರ್ಥ್ಯವಿತ್ತು, ಅದನ್ನು ಅನ್ಲಾಕ್ ಮಾಡಬೇಕಿತ್ತು ಅಷ್ಟೇ,” ಎಂದು ಡಿಕೆ ವಿವರಿಸಿದ್ದಾರೆ.
ಜಿತೇಶ್ ಅವರಲ್ಲಿದ್ದ ಕೊರತೆ ಏನು?
ಜಿತೇಶ್ ಅವರಲ್ಲಿದ್ದ ಕೊರತೆಯ ಬಗ್ಗೆಯೂ ಕಾರ್ತಿಕ್ ಬೆಳಕು ಚೆಲ್ಲಿದ್ದಾರೆ. “ಅವರು ನೆಲದ ಮೇಲಿನ ಹೊಡೆತಗಳಲ್ಲಿ (vertical swing) ಬಹಳ ಉತ್ತಮವಾಗಿದ್ದರು. ಆದರೆ, ಅವರ ಬಳಿ ಯಾವುದೇ ಹೊಸ ರೀತಿಯ ಹೊಡೆತಗಳು (innovotive shots) ಇರಲಿಲ್ಲ. ಏಕೆಂದರೆ, ಅವರು ಆಡಿದಲ್ಲೆಲ್ಲಾ, ‘ನಿನ್ನ ಬಳಿ ನೆಲದ ಮೇಲಿನ ಉತ್ತಮ ಹೊಡೆತಗಳಿರುವಾಗ, ಬೇರೆ ರೀತಿಯ ಹೊಡೆತಗಳಿಗೆ ಏಕೆ ಪ್ರಯತ್ನಿಸುತ್ತೀಯಾ?’ ಎಂದು ಹೇಳಲಾಗಿತ್ತು ಕಾರ್ತಿಕ್ ತಿಳಿಸಿದ್ದಾರೆ.
ಐಪಿಎಲ್ 2025ರಲ್ಲಿ ಜಿತೇಶ್ ಅವರು ಆ ಕೊರತೆಯನ್ನು ನೀಗಿಸಿಕೊಂಡು, ತಮ್ಮ ಆಟದಲ್ಲಿ ಹೊಸತನವನ್ನು ಪ್ರದರ್ಶಿಸಿದ್ದೇ ಅವರ ಯಶಸ್ಸಿಗೆ ಮತ್ತು ಭಾರತ ತಂಡಕ್ಕೆ ಪುನರಾಗಮನ ಮಾಡಲು ಕಾರಣವಾಯಿತು ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.