ಬೆಂಗಳೂರು: ನವರಸನ್ ನಿರ್ಮಾಣದ ಹಾಗೂ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಈ ಚಿತ್ರ ಮೇ. 9 ರಂದು ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ.
ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಕನ್ನಡ ಸೇರಿದಂತೆ ಅನೇಕ ಭಾಷೆಗಳ 1800ಕ್ಕೂ ಅಧಿಕ ಚಿತ್ರಗಳ ಇವೆಂಟ್ ಗಳನ್ನು ಆಯೋಜಿಸಿರುವ, ಅಷ್ಟೇ ಅಲ್ಲದೆ ನಿರ್ಮಾಪಕ ಹಾಗೂ ನಿರ್ದೇಶಕರಾಗಿಯೂ ಜನಪ್ರಿಯರಾಗಿರುವ ನವರಸನ್ ನಿರ್ಮಾಣದ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ “ಸೂತ್ರಧಾರಿ” ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಜನ ಮೆಚ್ಚಿಕೊಂಡಿದ್ದಾರೆ.
ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ ಈ ಚಿತ್ರ ತಂಡಕ್ಕೆ ಹಾರೈಸಿದರು. ನಿರ್ಮಾಪಕರಾದ ಚೇತನ್ ಗೌಡ, ಜಗದೀಶ್ ಗೌಡ, ರಾಜೇಶ್ ಹಾಗೂ ಗಜೇಂದ್ರ ಅವರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ತಮ್ಮ ಪ್ರೋತ್ಸಾಹ ಭರಿತ ಮಾತುಗಳ ಮೂಲಕ “ಸೂತ್ರಧಾರಿ” ಚಿತ್ರಕ್ಕೆ ಯಶಸ್ಸನ್ನು ಕೋರಿದರು. ವಿಜಯ್ ಈಶ್ವರ್ ಅವರು ಬರೆದಿರುವ “ಸೂತ್ರಧಾರಿ” ಚಿತ್ರದ ಶೀರ್ಷಿಕೆ ಗೀತೆಯನ್ನು ನಾಯಕನಾಗಿ ನಟಿಸಿರುವ ಚಂದನ್ ಶೆಟ್ಟಿ ಅವರೆ ಹಾಡಿದ್ದಾರೆ.
ನಮ್ಮ “ಸೂತ್ರಧಾರಿ” ಸಿನಿಮಾ ಆರಂಭವಾದಗಿನಿಂದಲೂ ತಾವೆಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ಸದಾ ನನ್ನ ಎಲ್ಲಾ ಕೆಲಸಗಳಿಗೂ ಜೊತೆಗಿದ್ದು, ಪ್ರೋತ್ಸಾಹ ನೀಡುವ ಸಾಯಿ ಗೋಲ್ಡ್ ಪ್ಯಾಲೆಸ್ ನ ಶರವಣ, ಚೇತನ್ ಗೌಡ, ಜಗದೀಶ್ ಗೌಡ, ರಾಜೇಶ್, ಗಜೇಂದ್ರ ಮುಂತಾದವರು ಇಂದಿನ ಸಮಾರಂಭಕ್ಕೆ ಆಗಮಿಸಿದ್ದಾರೆ. ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ. ವಿಜಯ್ ಈಶ್ವರ್ ಅವರು ಬರೆದಿರುವ ಈ ಚಿತ್ರದ ಟೈಟಲ್ ಸಾಂಗ್ ತುಂಬಾ ಚೆನ್ನಾಗಿದೆ. ಅರ್ಥಗರ್ಭಿತ ಈ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ. ಚಿತ್ರ ಮೇ 9 ರಂದು ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ನವರಸನ್.
ನಾನು ನಾಯಕನಾಗಬೇಕೆಂಬ ಆಸೆ ನಮ್ಮ ಅಪ್ಪನದು. ಇದೇ ಮೇ. 9 ನೇ ತಾರೀಖು ಅವರ ಆಸೆ ಈಡೇರುತ್ತಿದೆ. ನಾನು ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ಅಂದು ಬಿಡುಗಡೆಯಾಗುತ್ತಿದೆ. ಗಾಯಕನಾಗಿ ನನ್ನನ್ನು ಎಲ್ಲರೂ ಮೆಚ್ಚಿಕೊಂಡು ಆಶೀರ್ವದಿಸಿದ್ದೀರಿ. ಈಗ ನಾಯಕನಾಗೂ ಮೆಚ್ಚಿಕೊಳ್ಳುತ್ತೀರಾ ಎಂಬ ಭರವಸೆ ಇದೆ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ಚಿತ್ರದ ನಿರ್ದೇಶಕ ಕಿರಣ್ ಕುಮಾರ್, ನಾಯಕಿ ಅಪೂರ್ವ, ನಟ ತಬಲ ನಾಣಿ ಹಾಗೂ ಹಾಡು ಬರೆದಿರುವ ವಿಜಯ್ ಈಶ್ವರ್ ಮುಂತಾದವರು “ಸೂತ್ರಧಾರಿ” ಕುರಿತು ಮಾತನಾಡಿದರು.