ಅಹಮದಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಬಹುನಿರೀಕ್ಷಿತ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿವೆ. ತವರಿನಲ್ಲಿ ಕಪ್ ಎತ್ತಿ ಹಿಡಿಯಲು ಟೀಮ್ ಇಂಡಿಯಾ ಹುಮ್ಮಸ್ಸಿನಲ್ಲಿದ್ದರೆ, ಅತ್ತ ನ್ಯೂಜಿಲೆಂಡ್ ತಂಡ ಚೊಚ್ಚಲ ಟಿ20 ವಿಶ್ವಕಪ್ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.
2015ರ ನಂತರ ನ್ಯೂಜಿಲೆಂಡ್ ಪ್ರವೇಶಿಸುತ್ತಿರುವ ಐದನೇ ಐಸಿಸಿ ವೈಟ್-ಬಾಲ್ ಫೈನಲ್ ಇದಾಗಿದ್ದು, ಹಿಂದಿನ ಎಲ್ಲಾ ಫೈನಲ್‌ಗಳಲ್ಲೂ ನಿರಾಸೆ ಅನುಭವಿಸಿರುವ ಕಿವೀಸ್ ಪಡೆಗೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ, ಕ್ರೀಡಾಂಗಣದಲ್ಲಿ ಸಂಪೂರ್ಣವಾಗಿ ಭಾರತೀಯ ಅಭಿಮಾನಿಗಳೇ ತುಂಬಿರುವಾಗ, ತಮ್ಮ ತಂಡಕ್ಕೆ ಬೆಂಬಲ ನೀಡುವಂತೆ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ತಮ್ಮ ತಾಯ್ನಾಡಿನ ಅಭಿಮಾನಿಗಳಿಗೆ ಭಾವುಕ ಕರೆಯೊಂದನ್ನು ನೀಡಿದ್ದಾರೆ.
ನಾವಿಲ್ಲಿ ಅಕ್ಷರಶಃ ಒಂಟಿಯಾಗಿದ್ದೇವೆ, ನಿಮ್ಮ ಬೆಂಬಲ ಬೇಕಿದೆ
ಅಹಮದಾಬಾದ್‌ನ 1.30 ಲಕ್ಷ ಸಾಮರ್ಥ್ಯದ ಬೃಹತ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮೈದಾನದಲ್ಲಿ ಬೆಂಬಲ ಸಿಗುವುದು ತೀರಾ ವಿರಳ ಎಂಬುದು ನಾಯಕ ಸ್ಯಾಂಟ್ನರ್ ಅವರಿಗೆ ಚೆನ್ನಾಗಿ ತಿಳಿದಿದೆ. ಈ ಕುರಿತು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ವಿಶೇಷ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, ತಾಯ್ನಾಡಿನ ಅಭಿಮಾನಿಗಳಲ್ಲಿ ಬೆಂಬಲ ಯಾಚಿಸಿದ್ದಾರೆ. “ಭಾನುವಾರ ನಿಮ್ಮನ್ನು ವಿಚಲಿತಗೊಳಿಸುತ್ತಿರುವುದಕ್ಕೆ ಕ್ಷಮೆಯಿರಲಿ. ನಾನು ದೊಡ್ಡ ಭಾಷಣ ಮಾಡುವವನಲ್ಲ. ಆದರೆ, ಸೋಮವಾರ ಮುಂಜಾನೆ ನಡೆಯಲಿರುವ ಭಾರತ ವಿರುದ್ಧದ ಫೈನಲ್ ಪಂದ್ಯದ ಬಗ್ಗೆ ನಿಮಗೆ ನೆನಪಿಸಲು ಬಯಸುತ್ತೇನೆ. 1.4 ಬಿಲಿಯನ್ ಜನಸಂಖ್ಯೆ ಇರುವ ಭಾರತದ ಅಭಿಮಾನಿಗಳ ಮುಂದೆ ನಾವಿಲ್ಲಿ ಅಕ್ಷರಶಃ ಒಂಟಿಯಾಗಿದ್ದೇವೆ. ಕ್ರೀಡಾಂಗಣದ ಬಹುತೇಕ ಸೀಟುಗಳಲ್ಲಿ ಭಾರತೀಯರೇ ತುಂಬಿರುತ್ತಾರೆ ಹಾಗೂ ಅವರಿಗೇ ಬೆಂಬಲ ಸಿಗುತ್ತದೆ ಎಂಬುದು ನಮಗೆ ತಿಳಿದಿದೆ. ಆದರೆ, ನಮ್ಮ ತಾಯ್ನಾಡಿನಲ್ಲಿರುವ ನೀವು ನಮ್ಮ ಬೆನ್ನಿಗಿದ್ದೀರಿ ಎಂಬ ವಿಶ್ವಾಸ ನಮಗಿದೆ,” ಎಂದು ಅವರು ಬರೆದುಕೊಂಡಿದ್ದಾರೆ.
ತಡವಾದರೆ ನನ್ನ ಹೆಸರು ಹೇಳಿ; ನಾಯಕನ ಹಾಸ್ಯಭರಿತ ಸಂದೇಶ
ಅಹಮದಾಬಾದ್‌ನಲ್ಲಿ ಭಾನುವಾರ ಸಂಜೆ ಪಂದ್ಯ ಆರಂಭವಾಗುವಾಗ, ನ್ಯೂಜಿಲೆಂಡ್‌ನಲ್ಲಿ ಸೋಮವಾರ ಮುಂಜಾನೆ 2:30 ಆಗಿರುತ್ತದೆ. ಈ ಸಮಯದಲ್ಲಿ ಎಚ್ಚರಗೊಂಡು ಪಂದ್ಯ ವೀಕ್ಷಿಸುವುದು ಅಭಿಮಾನಿಗಳಿಗೆ ಕಷ್ಟ ಎಂಬುದು ಸ್ಯಾಂಟ್ನರ್ ಅವರಿಗೂ ತಿಳಿದಿದೆ. ಹಾಗಾಗಿ, ಅಭಿಮಾನಿಗಳನ್ನು ಹುರಿದುಂಬಿಸಲು ಅವರು ಒಂದು ಹಾಸ್ಯಭರಿತ ಮನವಿ ಮಾಡಿದ್ದಾರೆ. “ನೀವು ನಮ್ಮೊಂದಿಗೆ ಮೈದಾನದಲ್ಲಿ ಇಲ್ಲದೇ ಇರಬಹುದು, ಆದರೆ ನೀವು ಹಂಚಿಕೊಳ್ಳುವ ಫೋಟೋಗಳು, ಪೋಸ್ಟ್‌ಗಳು ಹಾಗೂ ನಮಗಾಗಿ ನೀವು ನಿದ್ದೆಗೆಡುತ್ತಿರುವ ಕಥೆಗಳು ನಮಗೆ ತಲುಪುತ್ತಿವೆ. ನಿಮ್ಮ ಪ್ರೀತಿ ನಮಗೆ ಅರ್ಥವಾಗುತ್ತದೆ. ಸೋಮವಾರ ಮುಂಜಾನೆ ಪಂದ್ಯ ವೀಕ್ಷಿಸುವುದು ಕಷ್ಟ. ಆದರೂ, ನಿಮ್ಮ ಅಲಾರಾಂ ಸೆಟ್ ಮಾಡಿ, ನಮಗಾಗಿ ಮತ್ತೊಮ್ಮೆ ಎಚ್ಚರಗೊಳ್ಳಿ. ಒಂದು ವೇಳೆ ಪಂದ್ಯ ನೋಡಿ ಶಾಲೆಗೆ ಅಥವಾ ಕಚೇರಿಗೆ ಹೋಗುವುದು ತಡವಾದರೆ, ದಯವಿಟ್ಟು ನಿಮ್ಮ ಶಿಕ್ಷಕರಿಗೆ ಅಥವಾ ಬಾಸ್‌ಗೆ ನನ್ನ ಈ ಸಂದೇಶವನ್ನು ತಿಳಿಸಿ. ನಾವು ಆದಷ್ಟು ಬೇಗ, ಜತೆಯಲ್ಲೊಂದು ಹೆಚ್ಚುವರಿ ಲಗೇಜ್ (ವಿಶ್ವಕಪ್ ಟ್ರೋಫಿ) ಹಿಡಿದುಕೊಂಡು ತಾಯ್ನಾಡಿಗೆ ಮರಳುವ ವಿಶ್ವಾಸದಲ್ಲಿದ್ದೇವೆ,” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಅಹಮದಾಬಾದ್ ಕ್ರೀಡಾಂಗಣವನ್ನು ಸ್ತಬ್ಧಗೊಳಿಸುವ ಗುರಿ
ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಯಾಂಟ್ನರ್, ಭಾರತೀಯ ಅಭಿಮಾನಿಗಳಿಂದ ತುಂಬಿ ತುಳುಕುವ ಕ್ರೀಡಾಂಗಣವನ್ನು ಸ್ತಬ್ಧಗೊಳಿಸುವುದೇ ತಮ್ಮ ಪ್ರಮುಖ ಗುರಿ ಎಂದು ಹೇಳಿದ್ದಾರೆ. “ಖಂಡಿತವಾಗಿಯೂ ಪ್ರೇಕ್ಷಕರನ್ನು ಸ್ತಬ್ಧಗೊಳಿಸುವುದು ನಮ್ಮ ಉದ್ದೇಶವಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಅನೇಕ ಅನಿರೀಕ್ಷಿತ ತಿರುವುಗಳಿರುತ್ತವೆ, ಇದು ಬಹಳ ಚಂಚಲವಾದ ಆಟ. ಈ ವಿಶ್ವಕಪ್‌ನಾದ್ಯಂತ ಎಲ್ಲಾ ತಂಡಗಳು ಸಮಾನ ಪೈಪೋಟಿ ನೀಡಿವೆ. ಪ್ರತಿ ಪಂದ್ಯದಲ್ಲೂ ಎದುರಾಗುವ ಕೆಲವು ಸಣ್ಣ ಕ್ಷಣಗಳು ಇಡೀ ಪಂದ್ಯದ ಗತಿಯನ್ನೇ ಬದಲಾಯಿಸುತ್ತವೆ, ಹಾಗಾಗಿ ನಾವು ಎಚ್ಚರಿಕೆಯಿಂದ ಆಡಲಿದ್ದೇವೆ,” ಎಂದು ಅವರು ವಿವರಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಕಿವೀಸ್ ಮೇಲುಗೈ
ಐತಿಹಾಸಿಕ ಅಂಕಿಅಂಶಗಳನ್ನು ಗಮನಿಸಿದರೆ, ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡವು 3-0 ಅಂತರದ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದೆ. ಇದು ಕಿವೀಸ್ ಪಡೆಯ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿರುವ ನ್ಯೂಜಿಲೆಂಡ್, ಇದೀಗ ಅದೇ ಹುಮ್ಮಸ್ಸಿನಲ್ಲಿ ಆತಿಥೇಯ ಭಾರತವನ್ನು ಎದುರಿಸಲು ಸಜ್ಜಾಗಿದೆ.
ಇದನ್ನೂ ಓದಿ : ವಿಶ್ವಕಪ್ ಗೆದ್ದು ಟೀಕಾಕಾರರಿಗೆ ಉತ್ತರ ನೀಡಲಿದ್ದಾರೆಯೇ ಕೋಚ್ ಗೌತಮ್ ಗಂಭೀರ್



















