ರಾಯ್ಪುರ: ಛತ್ತೀಸ್‌ಗಢದಲ್ಲಿ ಇಬ್ಬರು ಕೇರಳ ಮೂಲದ ಸನ್ಯಾಸಿನಿಯರು ಮತ್ತು ಒಬ್ಬ ಬುಡಕಟ್ಟು ವ್ಯಕ್ತಿಯನ್ನು ಬಂಧಿಸಿರುವ ಘಟನೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿದೆ. ಇದರ ನಡುವೆಯೇ ಬಂಧಿತ ಸನ್ಯಾಸಿನಿಯರು ತಮ್ಮ ಹೆಣ್ಣುಮಕ್ಕಳನ್ನು ಬಲವಂತದ ಮತಾಂತರ ಅಥವಾ ಮಾನವ ಕಳ್ಳಸಾಗಣೆ ಮಾಡಿದ್ದಾರೆ ಎಂಬ ಆರೋಪವನ್ನು ಬುಡಕಟ್ಟು ಯುವತಿಯರ ಕುಟುಂಬಗಳು ನಿರಾಕರಿಸಿವೆ.
ಜುಲೈ 25ರಂದು ಛತ್ತೀಸ್‌ಗಢದ ದುರ್ಗ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಬಜರಂಗದಳದ ಸದಸ್ಯರಾದ ರವಿ ನಿಗಮ್ ನೀಡಿದ ದೂರಿನ ಆಧಾರದ ಮೇಲೆ, ಕೇರಳ ಮೂಲದ ಸನ್ಯಾಸಿನಿಯರಾದ ಪ್ರೀತಿ ಮೇರಿ ಮತ್ತು ವಂದನಾ ಫ್ರಾನ್ಸಿಸ್ ಹಾಗೂ ನಾರಾಯಣಪುರದ ನಿವಾಸಿ ಸುಕಮಾನ್ ಮಾಂಡವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯೋಗದ ನೆಪದಲ್ಲಿ ಮೂವರು ಬುಡಕಟ್ಟು ಯುವತಿಯರನ್ನು ಆಗ್ರಾಕ್ಕೆ ಬಲವಂತವಾಗಿ ಸಾಗಿಸಿ ಧಾರ್ಮಿಕ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಕುಟುಂಬಗಳಿಂದ ಆರೋಪ ನಿರಾಕರಣೆ
ಆದಾಗ್ಯೂ, ಯುವತಿಯರ ಕುಟುಂಬ ಸದಸ್ಯರು ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಒಬ್ಬ ಯುವತಿಯ ಅಕ್ಕ, “ನಮ್ಮ ತಂದೆ-ತಾಯಿ ಈಗಿಲ್ಲ. ನನ್ನ ಸಹೋದರಿ ಸ್ವಾವಲಂಬಿಯಾಗಲಿ ಎಂದು ನಾನೇ ಅವಳನ್ನು ಸನ್ಯಾಸಿನಿಯರ ಜೊತೆ ಆಗ್ರಾದಲ್ಲಿ ನರ್ಸಿಂಗ್ ಕೆಲಸಕ್ಕೆ ಕಳುಹಿಸಿದ್ದೇನೆ” ಎಂದು ಹೇಳಿದ್ದಾರೆ.
ಮತ್ತೊಬ್ಬ ಸಂಬಂಧಿ, ತಮ್ಮ ಕುಟುಂಬ ಐದು ವರ್ಷಗಳ ಹಿಂದೆಯೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದೆ ಮತ್ತು ತಮ್ಮ ಸಹೋದರಿ ಸ್ವಇಚ್ಛೆಯಿಂದಲೇ ಜುಲೈ 24 ರಂದು ತೆರಳಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಂಧನವನ್ನು “ಅನ್ಯಾಯ ಮತ್ತು ಕುತಂತ್ರ” ಎಂದು ಕರೆದಿರುವ ಅವರು, ಸನ್ಯಾಸಿನಿಯರು ಮತ್ತು ಮಾಂಡವಿಯನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುರಿಯಾ, ಮೂರೂ ಕುಟುಂಬಗಳು ತಮ್ಮ ಹೆಣ್ಣುಮಕ್ಕಳನ್ನು ಉದ್ಯೋಗಕ್ಕಾಗಿ ಸ್ವಇಚ್ಛೆಯಿಂದ ಸನ್ಯಾಸಿನಿಯರೊಂದಿಗೆ ಕಳುಹಿಸಿರುವುದಾಗಿ ಜುಲೈ 26 ರಂದು ಲಿಖಿತ ಹೇಳಿಕೆಗಳನ್ನು ಸಲ್ಲಿಸಿರುವುದನ್ನು ಖಚಿತಪಡಿಸಿದ್ದಾರೆ.
ರಾಜಕೀಯ ವಿವಾದಕ್ಕೆ ಕಾರಣವಾದ ಘಟನೆ
ಈ ಬಂಧನವು ಭಾರತದಾದ್ಯಂತ ಕ್ರಿಶ್ಚಿಯನ್ ಸಂಸ್ಥೆಗಳು, ಮಾನವ ಹಕ್ಕುಗಳ ಸಂಘಟನೆಗಳು, ಚರ್ಚ್ ಮುಖಂಡರು ಮತ್ತು ರಾಜಕೀಯ ಪಕ್ಷಗಳಿಂದ ತೀವ್ರ ಖಂಡನೆಗೆ ಗುರಿಯಾಗಿದೆ. ದೆಹಲಿ ಮತ್ತು ಕೇರಳದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳೂ ನಡೆದಿವೆ.
ಇನ್ನೊಂದೆಡೆ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. “ಇದು ಪ್ರಲೋಭನೆ ಮತ್ತು ಕಳ್ಳಸಾಗಣೆಯ ಗಂಭೀರ ಪ್ರಕರಣ. ನಮ್ಮ ಬಸ್ತಾರ್ ಹೆಣ್ಣುಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ವಿಷಯವನ್ನು ರಾಜಕೀಯಗೊಳಿಸುವುದು ದುರದೃಷ್ಟಕರ,” ಎಂದು ಅವರು ಹೇಳಿದ್ದಾರೆ.
ಬಜರಂಗದಳದ ಸಮರ್ಥನೆ:
ಇದೇ ವೇಳೆ ದೂರುದಾರರಾದ ಬಜರಂಗದಳದ ಸದಸ್ಯೆ ಜ್ಯೋತಿ ಶರ್ಮಾ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದು, “ನಾವು ಕೇಳಿದಾಗ ಸನ್ಯಾಸಿನಿಯರಾಗಲಿ, ಹುಡುಗಿಯರಾಗಲಿ ಯಾವುದೇ ಒಪ್ಪಿಗೆ ಪತ್ರವನ್ನು ತೋರಿಸಲಿಲ್ಲ. ಆ ಹುಡುಗಿಯರು ಅಳುತ್ತಿದ್ದರು ಮತ್ತು ಮನೆಗೆ ಮರಳಲು ಬಯಸಿದ್ದರು. ನಾನು ಹಿಂದೂ ಹೆಣ್ಣುಮಕ್ಕಳನ್ನು ದಾರಿ ತಪ್ಪಿಸುವುದರಿಂದ ರಕ್ಷಿಸುತ್ತಿದ್ದೇನೆ,” ಎಂದು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಮಾನವ ಕಳ್ಳಸಾಗಣೆ ಮತ್ತು ಕಾನೂನುಬಾಹಿರ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹಿಂದಿನ ಪ್ರಕರಣಗಳಲ್ಲಿ ಬಜರಂಗದಳದ ಕಾರ್ಯಕರ್ತರು ಮತಾಂತರ ವಿರೋಧಿ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳ ಬಗ್ಗೆ ಛತ್ತೀಸ್‌ಗಢ ಹೈಕೋರ್ಟ್ ಗಮನಹರಿಸಿದ್ದು, ಇಂತಹ ಬಂಧನಗಳ ಕಾನೂನುಬದ್ಧತೆಯ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.