ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಿಂದ ಸುಮಾರು 52 ಲಕ್ಷ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಮಂಗಳವಾರ ಹೇಳಿದೆ. ಇದರ ಬೆನ್ನಲ್ಲೇ ಲೋಕಸಭೆಯಲ್ಲಿ ತೀವ್ರ ಕೋಲಾಹಲವೇ ಉಂಟಾಗಿದೆ.
ಈ ಸಂಬಂಧ ಮಂಗಳವಾರ ಹೇಳಿಕೆ ಹೊರಡಿಸಿರುವ ಇಸಿಐ, ಪ್ರಾಥಮಿಕ ಪರಿಷ್ಕರಣೆ ಕಾರ್ಯದಲ್ಲಿ 18.66 ಲಕ್ಷ ಮತದಾರರು ಮೃತಪಟ್ಟಿದ್ದಾರೆ. 26.01 ಲಕ್ಷ ಮಂದಿ ಶಾಶ್ವತವಾಗಿ ವಲಸೆ ಹೋದವರಾಗಿದ್ದಾರೆ. 7.5 ಲಕ್ಷ ಮಂದಿ ನಕಲಿಯಾಗಿ ಹೆಸರು ನೋಂದಾಯಿಸಿಕೊಂಡಿದ್ದವರಾಗಿದ್ದಾರೆ. 11,484 ಮತದಾರರನ್ನು ಪತ್ತೆ ಹಚ್ಚಲಾಗಿಲ್ಲ ಎಂದು ಹೇಳಿದೆ.
ಜೂನ್ 24 ರ ಹೊತ್ತಿಗೆ ಬಿಹಾರದಲ್ಲಿ ಒಟ್ಟು 7.89 ಕೋಟಿ ನೋಂದಾಯಿತ ಮತದಾರರಿದ್ದರು. ಶೇ. 90.67 ರಷ್ಟು ಮತದಾರರು ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳಲ್ಲಿ ಶೇ. 90.37 ರಷ್ಟು ಡಿಜಿಟಲೀಕರಣಗೊಂಡಿದೆ ಎಂದು ಆಯೋಗವು ವರದಿ ಮಾಡಿದೆ. ಈ ವಿಷಯವಾಗಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಮಧ್ಯೆ ತೀವ್ರ ಕೋಲಾಹಲವೇ ಉಂಟಾಗಿದೆ.