ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಕ್ರಿಕೆಟ್ ಲೋಕದ ರನ್ ಮಿಷನ್ ವಿರಾಟ್ ಕೊಹ್ಲಿ ನಡುವಿನ ಬಾಂಧವ್ಯವು ಕ್ರೀಡಾ ಜಗತ್ತಿನ ವಿಶಿಷ್ಟ ಅಧ್ಯಾಯಗಳಲ್ಲಿ ಒಂದಾಗಿದೆ. ಇದೀಗ ಈ ಬಾಂಧವ್ಯ ಮತ್ತಷ್ಟು ವರ್ಷಗಳ ಕಾಲ ಮುಂದುವರಿಯುವುದು ಖಚಿತವಾಗಿದೆ. ‘
ಆರ್‌ಸಿಬಿ ಫ್ರಾಂಚೈಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಜೇಶ್ ಮೆನನ್ ಅವರು, ವಿರಾಟ್ ಕೊಹ್ಲಿ ಅವರ ವೃತ್ತಿಜೀವನ ಹಾಗೂ ಫ್ರಾಂಚೈಸಿಯೊಂದಿಗಿನ ಒಡನಾಟದ ಭವಿಷ್ಯದ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಕೊಹ್ಲಿ ಇನ್ನು ಕನಿಷ್ಠ ಮೂರ್ನಾಲ್ಕು ವರ್ಷಗಳ ಕಾಲ ಆರ್‌ಸಿಬಿ ಪರವಾಗಿ ಕಣಕ್ಕಿಳಿಯಲಿದ್ದಾರೆ. ಅಂದರೆ 2030ರವರೆಗೂ ರೆಡ್-ಆ್ಯಂಡ್-ಗೋಲ್ಡ್ ಜರ್ಸಿಯಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಆರ್‌ಸಿಬಿ ಹಾಗೂ ವಿರಾಟ್ ಒಂದೇ ನಾಣ್ಯದ ಎರಡು ಮುಖಗಳು”
ಸಿಎನ್‌ಬಿಸಿ ಟಿವಿ18 ಸಂದರ್ಶನದಲ್ಲಿ ಮಾತನಾಡಿದ ರಾಜೇಶ್ ಮೆನನ್, ವಿರಾಟ್ ಕೊಹ್ಲಿ ಅವರ ದೈಹಿಕ ಸಾಮರ್ಥ್ಯ, ಆಟದೆಡೆಗಿನ ಬದ್ಧತೆ ಹಾಗೂ ಸತತ ಯಶಸ್ಸಿನ ಹಸಿವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 2008ರಲ್ಲಿ ಐಪಿಎಲ್ ಟೂರ್ನಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ಕೇವಲ ಒಂದೇ ಫ್ರಾಂಚೈಸಿ ಪರ ಆಡಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ವಿರಾಟ್ ಅವರದ್ದು. “ವಿರಾಟ್ ಹಾಗೂ ಆರ್‌ಸಿಬಿ ಎಂದರೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆರ್‌ಸಿಬಿ ತಂಡವು ಆತನಿಲ್ಲದೆ ಆಡುವುದನ್ನು ಊಹಿಸಿಕೊಳ್ಳಲೂ ನಮಗೆ ಸಾಧ್ಯವಿಲ್ಲ. ಅವರ ಕ್ರಿಕೆಟ್ ವೃತ್ತಿಜೀವನ ಅಂತ್ಯಗೊಂಡ ಬಳಿಕವೂ ಫ್ರಾಂಚೈಸಿಯೊಂದಿಗಿನ ನಂಟು ಮುಂದುವರಿಯಲಿದೆ. ಅವರ ಫಿಟ್ನೆಸ್ ಅದ್ಭುತವಾಗಿದೆ ಹಾಗೂ ರನ್ ಗಳಿಸುವ ಹಸಿವು ಎಂದಿಗೂ ಸಾಯುವುದಿಲ್ಲ. ಈ ಬಾರಿಯ ಐಪಿಎಲ್‌ನಲ್ಲೂ ಅವರು ತೋರಿದ ಶಕ್ತಿ, ಪ್ರದರ್ಶನ ಹಾಗೂ ಆ್ಯಟಿಟ್ಯೂಡ್ ಇದಕ್ಕೆ ಸಾಕ್ಷಿ. ಹೀಗಾಗಿ, ಅವರು ಇನ್ನೂ ಮೂರ್ನಾಲ್ಕು ವರ್ಷ ಆಡುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರನ್ ಮಳೆ ಸುರಿಸುವ ಮಿಷನ್: ವಯಸ್ಸಾದರೂ ಕುಗ್ಗದ ಉತ್ಸಾಹ
ಐಪಿಎಲ್ ಇತಿಹಾಸದಲ್ಲಿ 283 ಪಂದ್ಯಗಳಿಂದ ಬರೋಬ್ಬರಿ 9,336 ರನ್ ಸಿಡಿಸಿ ಸಾರ್ವಕಾಲಿಕ ಅಧಿಕ ರನ್ ಸರದಾರ ಎನಿಸಿಕೊಂಡಿರುವ ವಿರಾಟ್, ವಯಸ್ಸು ಹೆಚ್ಚಾಗುತ್ತಿದ್ದಂತೆ ಮತ್ತಷ್ಟು ಪ್ರಬುದ್ಧರಾಗುತ್ತಿದ್ದಾರೆ. 2016ರಲ್ಲಿ 973 ರನ್ ಸಿಡಿಸಿ ದಾಖಲೆ ನಿರ್ಮಿಸಿದ್ದ ಕೊಹ್ಲಿ, ಇತ್ತೀಚಿನ ವರ್ಷಗಳಲ್ಲೂ ತಮ್ಮ ರನ್ ದಾಹ ತಗ್ಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. 2024ರಲ್ಲಿ 741 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಗೆದ್ದಿದ್ದ ಅವರು, 2025ರಲ್ಲಿ 657 ರನ್ ಸಿಡಿಸಿ ಆರ್‌ಸಿಬಿಯ ಬಹುಕಾಲದ ಕಪ್ ಗೆಲ್ಲುವ ಕನಸನ್ನು ನನಸು ಮಾಡಿದ್ದರು.
2026ರ ಪ್ರಸಕ್ತ ಆವೃತ್ತಿಯಲ್ಲೂ ಅವರು ತಂಡದ ಬೆನ್ನೆಲುಬಾಗಿ ನಿಂತಿದ್ದಾರೆ. 675 ಟೂರ್ನಿಯಲ್ಲಿ ರನ್ ಕಲೆಹಾಕಿರುವ ವಿರಾಟ್, ಆರ್‌ಸಿಬಿ ತಂಡವು ಸತತ ಎರಡನೇ ವರ್ಷ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ ಅಜೇಯ 75 ರನ್ ಸಿಡಿಸಿದ ಕೊಹ್ಲಿ, ತಮ್ಮ ಐಪಿಎಲ್ ವೃತ್ತಿಜೀವನದ ಅತಿವೇಗದ ಅರ್ಧಶತಕವನ್ನು ದಾಖಲಿಸುವುದರ ಜೊತೆಗೆ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಈ ಪರಿಶ್ರಮ, ವಯಸ್ಸನ್ನೂ ಮೀರಿ ನಿಲ್ಲುವ ಸಾಧನೆಯ ತುಡಿತವೇ ಅವರು ಇನ್ನು ಹಲವು ವರ್ಷಗಳ ಕಾಲ ಆರ್‌ಸಿಬಿ ಸಾಮ್ರಾಜ್ಯದ ಆಧಾರಸ್ತಂಭವಾಗಿ ನಿಲ್ಲಲಿದ್ದಾರೆ ಎಂಬುದಕ್ಕೆ ಪುಷ್ಟಿ ನೀಡುತ್ತದೆ. ಮುಂಬರುವ ವರ್ಷಗಳಲ್ಲೂ ವಿರಾಟ್ ಕೊಹ್ಲಿಯ ಬ್ಯಾಟ್‌ನಿಂದ ಇದೇ ರೀತಿಯ ರನ್ ಪ್ರವಾಹ ಮುಂದುವರಿಯಲಿದೆ ಎಂಬುದು ಅಭಿಮಾನಿಗಳ ಹಾಗೂ ಫ್ರಾಂಚೈಸಿಯ ನೆಚ್ಚಿನ ಟೀಮ್-ಹೀರೋ ಮೇಲಿನ ನಂಬಿಕೆಯಾಗಿದೆ.



















