ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವುದರ ಮೂಲಕ 16 ತಿಂಗಳುಗಳ ಶತಕದ ಬರ ನೀಗಿಸಿಕೊಂಡಿದ್ದಾರೆ.
ಪರ್ತ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ 2023ರ ಜುಲೈ 21ರಂದು ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟೆಸ್ಟ್ ಶತಕ ಸಿಡಿಸಿದ್ದರು. ಈಗ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸುವ ಮೂಲಕ 30ನೇ ಶತಕ ಪೂರೈಸಿದ್ದಾರೆ.
ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 30 ಶತಕ ಸಿಡಿಸಿದ 16ನೇ ಆಟಗಾರರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಗಳ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. 9 ಶತಕಗಳೊಂದಿಗೆ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧ 9ನೇ ಟೆಸ್ಟ್ ಸೆಂಚುರಿ ಸಿಡಿಸಿ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಅವರ ಭರ್ಜರಿ ಶತಕ ಹಾಗೂ ಕೆ.ಎಲ್. ರಾಹುಲ್ ಅವರ ಅರ್ಧ ಶತಕದ ನೆರವಿನಿಂದಾಗಿ ಭಾರತ ತಂಡ 6 ವಿಕೆಟ್ ಕಳೆದುಕೊಂಡು 487 ರನ್ಗಳಿಸಿ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಘೋಷಿಸಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಮತ್ತೆ ಮುಗ್ಗರಿಸಿದ್ದು, 12 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.