ಕಠ್ಮಂಡು: ನೇಪಾಳದಲ್ಲಿ ಸೋಮವಾರ ಆರಂಭವಾಗಿರುವ ಯುವಜನರ(ಜೆನ್ ಝೆಡ್) ಪ್ರತಿಭಟನೆ ಮಂಗಳವಾರವೂ ಮುಂದುವರಿದಿದ್ದು, ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಳ್ಳಂಬೆಳಗ್ಗೆಯೇ ಪ್ರತಿಭಟನಾಕಾರರು ಹಿಂಸಾಚಾರ, ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವ ಕೃತ್ಯಗಳಲ್ಲಿ ತೊಡಗಿದ್ದಾರೆ.
ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರ ನಿವಾಸಕ್ಕೆ ಉದ್ರಿಕ್ತರು ಬೆಂಕಿ ಹಚ್ಚಿದ್ದು, ಪ್ರತಿಭಟನಾಕಾರರು ಮನೆಯೊಳಗೆ ನುಗ್ಗಿ ದಾಂಧಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದಲ್ಲದೆ, ಮಾಜಿ ಪ್ರಧಾನಿಗಳಾದ ಪುಷ್ಪ ಕಮಲ್ ದಹಾಲ್ (ಪ್ರಚಂಡ) ಮತ್ತು ಶೇರ್ ಬಹದ್ದೂರ್ ದೇವುಬಾ ಅವರ ಮನೆಗಳ ಮೇಲೂ ದಾಳಿ ನಡೆದಿದೆ.

ಪ್ರಧಾನಿ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರದ ವಿರುದ್ಧದ ಯುವಜನರ ಆಕ್ರೋಶ ತೀವ್ರಗೊಂಡ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧವನ್ನು ವಾಪಸ್ ಮಾಡಿ ನಿನ್ನೆಯೇ ಓಲಿ ಆದೇಶ ಹೊರಡಿಸಿದ್ದರು. ಅಲ್ಲದೇ, ಓಲಿ ಸರ್ಕಾರದ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಆದರೂ, ಪ್ರತಿಭಟನಾಕಾರರ ಆಕ್ರೋಶದ ಬೆಂಕಿ ತಗ್ಗಿಲ್ಲ. ಪ್ರಧಾನಿಯವರ ಪದಚ್ಯುತಿಗೆ ಒತ್ತಾಯ ಹೆಚ್ಚುತ್ತಿದೆ.
ದೇಶದ ಹಲವು ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ರಾಜಧಾನಿ ಕಠ್ಮಂಡುವಿನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಕಠ್ಮಂಡು ಸೇರಿದಂತೆ ದೇಶದ ಹಲವೆಡೆ ಕರ್ಫ್ಯೂ ಜಾರಿಗೊಳಿಸಲಾಗಿದೆ. “ಮಕ್ಕಳನ್ನು ಕೊಲ್ಲುವುದನ್ನು ನಿಲ್ಲಿಸಿ” ಎಂಬ ಘೋಷಣೆಗಳು ಕಠ್ಮಂಡುವಿನ ಬೀದಿಗಳಲ್ಲಿ ಮೊಳಗುತ್ತಿವೆ.
ಪ್ರತಿಭಟನೆಗೆ ಕಾರಣವೇನು?
ಕಳೆದ ವಾರ, ನೇಪಾಳ ಸರ್ಕಾರವು ಫೇಸ್‌ಬುಕ್, ಎಕ್ಸ್ (ಹಿಂದಿನ ಟ್ವಿಟರ್) ಮತ್ತು ಯೂಟ್ಯೂಬ್‌ನಂತಹ ಪ್ರಮುಖ ಸಾಮಾಜಿಕ ಜಾಲತಾಣಗಳಿಗೆ ನಿಷೇಧ ಹೇರಿತ್ತು. ಸರ್ಕಾರದ ಹೊಸ ನಿಯಮಗಳ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಲು ವಿಫಲವಾದ ಕಾರಣ ಈ ಕ್ರಮ ಕೈಗೊಳ್ಳಲಾಗಿತ್ತು. ಈ ನಿಷೇಧದ ವಿರುದ್ಧ ಸೋಮವಾರ ಏಕಾಏಕಿ ಯುವಜನರು ಬೀದಿಗಿಳಿದಿದ್ದು, ಇದನ್ನು ‘ಜೆನ್-ಝಡ್’ (Gen Z) ಪ್ರತಿಭಟನೆ ಎಂದು ಕರೆಯಲಾಗುತ್ತಿದೆ. ಇದು 1995 ರಿಂದ 2010ರ ನಡುವೆ ಜನಿಸಿದ ಯುವಜನರ ಆಕ್ರೋಶದ ಪ್ರತೀಕವಾಗಿರುವ ಕಾರಣ ಇದಕ್ಕೆ ಈ ಹೆಸರು ಬಂದಿದೆ. “ಸಾಮಾಜಿಕ ಮಾಧ್ಯಮ ನಿಷೇಧವನ್ನು ನಿಲ್ಲಿಸಿ, ಭ್ರಷ್ಟಾಚಾರವನ್ನು ನಿಲ್ಲಿಸಿ” ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದಾರೆ.
ಯುವಜನರ ತೀವ್ರ ಆಕ್ರೋಶಕ್ಕೆ ಮಣಿದ ಪ್ರಧಾನಿ ಓಲಿ, ಸಾಮಾಜಿಕ ಮಾಧ್ಯಮ ಮೇಲಿನ ನಿಷೇಧವನ್ನು ಹಿಂಪಡೆದರೂ, ಪ್ರತಿಭಟನೆಗಳು ನಿಂತಿಲ್ಲ. ಬದಲಾಗಿ, ಸರ್ಕಾರದ ವಿರುದ್ಧದ ಆಕ್ರೋಶ ಮತ್ತಷ್ಟು ಹೆಚ್ಚಾಗಿದ್ದು, ಪ್ರಧಾನಿ ರಾಜೀನಾಮೆಗೆ ಒತ್ತಡ ಹೆಚ್ಚಾಗತೊಡಗಿದೆ.