ಬೆಂಗಳೂರು : 2026ರ ಆರಂಭದಲ್ಲೇ ಭಾರತದ ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆಯಲ್ಲಿ ಅತ್ಯಂತ ಕುತೂಹಲಕಾರಿ ಬೆಳವಣಿಗೆಯೊಂದು ಗೋಚರಿಸಿದೆ. 2021ರಿಂದಲೇ ಭಾರತದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿರುವ ಚೀನಾದ ದೈತ್ಯ ಕಂಪನಿ ಬಿವೈಡಿ (BYD) ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು, ಕೇವಲ ಕೆಲವು ತಿಂಗಳ ಹಿಂದಷ್ಟೇ ಮಾರುಕಟ್ಟೆ ಪ್ರವೇಶಿಸಿದ ವಿಯೆಟ್ನಾಂ ಮೂಲದ ವಿನ್ಫಾಸ್ಟ್ (Vinfast) ಕಂಪನಿಯು ಹಿಂದಿಕ್ಕುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ.
ಕೇವಲ ಎರಡು ಮಾಡೆಲ್ಗಳೊಂದಿಗೆ 2025ರ ಸೆಪ್ಟೆಂಬರ್ನಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟ ವಿನ್ಫಾಸ್ಟ್, 2026ರ ಈ ವರ್ಷದ ಆರಂಭಿಕ ತಿಂಗಳುಗಳಲ್ಲಿ ದೈತ್ಯ ಬಿವೈಡಿಗಿಂತ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡಿದೆ. ವಾಹನ್ (VAHAN) ದತ್ತಾಂಶಗಳ ಪ್ರಕಾರ, ಮಾರ್ಚ್ 3ರ ವರೆಗಿನ ವರ್ಷದ ಆರಂಭಿಕ ಮಾರಾಟದಲ್ಲಿ ಬಿವೈಡಿ 550 ಯುನಿಟ್ಗಳನ್ನು ಮಾರಾಟ ಮಾಡಿದ್ದರೆ, ವಿನ್ಫಾಸ್ಟ್ ಬರೋಬ್ಬರಿ 850 ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿ ಭಾರೀ ಮುನ್ನಡೆ ಸಾಧಿಸಿದೆ.
ಮಾರಾಟದ ಅಂಕಿಅಂಶಗಳ ಮೇಲೊಂದು ನೋಟ
ಭಾರತೀಯ ಮಾರುಕಟ್ಟೆಗೆ ತಡವಾಗಿ ಪ್ರವೇಶಿಸಿದರೂ ವಿನ್ಫಾಸ್ಟ್ ಸಾಧಿಸಿರುವ ಈ ಪ್ರಗತಿ ವಾಹನೋದ್ಯಮದ ಪಾಲಿಗೆ ಅಚ್ಚರಿ ಮೂಡಿಸಿದೆ. ವಿಶೇಷವೆಂದರೆ, ವಿನ್ಫಾಸ್ಟ್ ಕಂಪನಿಯು ಬಿವೈಡಿಯನ್ನು ಮಾರಾಟದಲ್ಲಿ ಹಿಂದಿಕ್ಕುತ್ತಿರುವುದು ಇದೇ ಮೊದಲೇನಲ್ಲ. 2025ರ ಡಿಸೆಂಬರ್ನಲ್ಲಿ ಬಿವೈಡಿ ಕೇವಲ 239 ಕಾರುಗಳನ್ನು ಮಾರಾಟ ಮಾಡಿದ್ದರೆ, ಮಾರುಕಟ್ಟೆ ಪ್ರವೇಶಿಸಿದ ಎರಡೇ ತಿಂಗಳಲ್ಲಿ ವಿನ್ಫಾಸ್ಟ್ 377 ಕಾರುಗಳನ್ನು ಗ್ರಾಹಕರಿಗೆ ತಲುಪಿಸಿತ್ತು. ಈ ವರ್ಷದ ಜನವರಿಯಲ್ಲಿ ವಿನ್ಫಾಸ್ಟ್ 435 ಯುನಿಟ್ ಹಾಗೂ ಬಿವೈಡಿ 224 ಯುನಿಟ್ ಮಾರಾಟ ದಾಖಲಿಸಿವೆ. ಫೆಬ್ರವರಿಯಲ್ಲಿ ವಿನ್ಫಾಸ್ಟ್ 384 ಕಾರುಗಳನ್ನು ಸೇಲ್ ಮಾಡಿದ್ದರೆ, ಬಿವೈಡಿ 306 ಕಾರುಗಳಿಗೆ ತೃಪ್ತಿಪಟ್ಟುಕೊಂಡಿದೆ. ಅಂದರೆ, ಈ ವರ್ಷದ ಮೊದಲ ಎರಡು ತಿಂಗಳಲ್ಲೇ 819 ವಿನ್ಫಾಸ್ಟ್ ಹಾಗೂ 530 ಬಿವೈಡಿ ಕಾರುಗಳು ಮಾರಾಟವಾಗಿವೆ ಎಂಬುದು ಇಲ್ಲಿ ಗಮನಾರ್ಹ.
ಬಿವೈಡಿಯನ್ನು ವಿನ್ಫಾಸ್ಟ್ ಹಿಂದಿಕ್ಕಿದ್ದು ಹೇಗೆ?
ವಿನ್ಫಾಸ್ಟ್ನ ಈ ದಿಢೀರ್ ಯಶಸ್ಸಿಗೆ ಅದರ ಜಾಣ್ಮೆಯ ಬೆಲೆ ನಿಗದಿ ತಂತ್ರ ಹಾಗೂ ಮಾರುಕಟ್ಟೆಗೆ ತಕ್ಕಂತ ಉತ್ಪನ್ನಗಳೇ ಪ್ರಮುಖ ಕಾರಣವಾಗಿವೆ. ಈ ಎರಡೂ ಕಂಪನಿಗಳ ಭಾರತದ ಕಾರ್ಯತಂತ್ರಗಳಲ್ಲಿ ಭಾರೀ ವ್ಯತ್ಯಾಸವಿದೆ. ಭಾರತೀಯ ಗ್ರಾಹಕರು ಬೆಲೆಯ ವಿಚಾರದಲ್ಲಿ ಎಷ್ಟು ಸೂಕ್ಷ್ಮ ಎಂಬುದನ್ನು ವಿನ್ಫಾಸ್ಟ್ ಸ್ಪಷ್ಟವಾಗಿ ಅರಿತುಕೊಂಡಿದೆ. ಭಾರತ ಸರ್ಕಾರದ ನೀತಿಗಳಿಗೆ ಪೂರಕವಾಗಿ ‘ಉತ್ಪಾದನೆಗೆ ಮೊದಲ ಆದ್ಯತೆ’ ಎಂಬ ಮಂತ್ರದೊಂದಿಗೆ ತಮಿಳುನಾಡಿನ ತೂತ್ತುಕುಡಿಯಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ.
ಪ್ರಸ್ತುತ ವಾರ್ಷಿಕ 50,000 ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಈ ಘಟಕವನ್ನು ಭವಿಷ್ಯದಲ್ಲಿ 1.5 ಲಕ್ಷ ಯುನಿಟ್ಗೆ ವಿಸ್ತರಿಸುವ ಬೃಹತ್ ಗುರಿಯಿದೆ. ಸದ್ಯ ವಿಎಫ್6 (VF6) ಮತ್ತು ವಿಎಫ್7 (VF7) ಕಾರುಗಳನ್ನು ಇಲ್ಲಿಯೇ ಉತ್ಪಾದಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ರಾಷ್ಟ್ರಗಳಿಗೂ ಇಲ್ಲಿಂದಲೇ ಕಾರುಗಳನ್ನು ರಫ್ತು ಮಾಡುವ ಯೋಜನೆಯನ್ನು ಕಂಪನಿ ಹೊಂದಿದೆ. ಭವಿಷ್ಯದಲ್ಲಿ ಜಿಎಸ್ಎಂ ರೈಡ್-ಹೇಲಿಂಗ್ ಸೇವೆಗಳಂತಹ ವ್ಯವಸ್ಥೆಯನ್ನು ತಂದು ಭಾರತದಲ್ಲಿ ಸಮಗ್ರ ಇವಿ ಪರಿಸರ ವ್ಯವಸ್ಥೆ ನಿರ್ಮಿಸುವ ಗುರಿಯನ್ನೂ ಕಂಪನಿ ಹೊಂದಿದೆ.
ಸ್ಥಳೀಯ ಉತ್ಪಾದನೆ ಮತ್ತು ಆಕರ್ಷಕ ಬೆಲೆ
ಸ್ಥಳೀಯವಾಗಿ ಬಿಡಿಭಾಗಗಳನ್ನು ಖರೀದಿಸುವ ಮೂಲಕ ಕಾರುಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಲು ಹಾಗೂ ಗ್ರಾಹಕರನ್ನು ಆಕರ್ಷಿಸಲು ವಿನ್ಫಾಸ್ಟ್ ಯಶಸ್ವಿಯಾಗಿದೆ. ಹ್ಯುಂಡೈ ಕ್ರೆಟಾ ಇವಿಗೆ ಪೈಪೋಟಿ ನೀಡುತ್ತಿರುವ ವಿಎಫ್6 ಕಾರಿನ ಎಕ್ಸ್-ಶೋರೂಂ ಬೆಲೆ 17.3 ಲಕ್ಷದಿಂದ 19.2 ಲಕ್ಷ ರೂಪಾಯಿಗಳಷ್ಟಿದೆ. ಹಾಗೆಯೇ ಟಾಟಾ ಹ್ಯಾರಿಯರ್ ಇವಿಗೆ ನೇರ ಸ್ಪರ್ಧೆಯೊಡ್ಡಿರುವ ದೊಡ್ಡ ವಿಎಫ್7 ಎಸ್ಯುವಿ ಕಾರು 21.9 ಲಕ್ಷದಿಂದ 26.8 ಲಕ್ಷ ರೂಪಾಯಿಗಳ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಈ ಮೌಲ್ಯಾಧಾರಿತ ಪ್ಯಾಕೇಜಿಂಗ್ ಹಾಗೂ ಡೀಲರ್ಶಿಪ್ ಜಾಲವನ್ನು ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವುದು ವಿನ್ಫಾಸ್ಟ್ ಯಶಸ್ಸಿನ ಗ್ರಾಫ್ ಹೆಚ್ಚಲು ಕಾರಣವಾಗಿದೆ.
ಬಿವೈಡಿ ಹಿನ್ನಡೆಗೆ ಕಾರಣಗಳೇನು?
ಮತ್ತೊಂದೆಡೆ, ಬಿವೈಡಿ ಇಮ್ಯಾಕ್ಸ್7, ಸೀಲ್, ಸೀಲಿಯನ್7 ಮತ್ತು ಆಟ್ಟೋ 3 ನಂತಹ ಪ್ರೀಮಿಯಂ ಕಾರುಗಳನ್ನು ಹೊಂದಿದ್ದು, ಇವುಗಳ ಬೆಲೆ 30 ಲಕ್ಷ ರೂಪಾಯಿಗಿಂತ ಮೇಲಿದೆ. ಉದಾಹರಣೆಗೆ ಬಿವೈಡಿ ಸೀಲ್ ಸೆಡಾನ್ ಕಾರಿನ ಬೆಲೆ 41 ಲಕ್ಷದಿಂದ 53.15 ಲಕ್ಷ ರೂಪಾಯಿಗಳಷ್ಟಿದೆ. 2025ರಲ್ಲಿ ಟೆಸ್ಲಾವನ್ನು ಹಿಂದಿಕ್ಕಿ ಜಗತ್ತಿನ ಅತಿ ದೊಡ್ಡ ಇವಿ ಮಾರಾಟಗಾರ ಎನಿಸಿಕೊಂಡಿದ್ದ ಬಿವೈಡಿ, ಭಾರತದಲ್ಲಿ ನಿಯಂತ್ರಕಗಳ ಸವಾಲನ್ನು ಎದುರಿಸುತ್ತಿದೆ. ಚೀನಾ ಹೂಡಿಕೆಗಳ ಮೇಲಿನ ಭದ್ರತಾ ಕಳವಳದಿಂದಾಗಿ ಹೈದರಾಬಾದ್ನಲ್ಲಿ ಬಿವೈಡಿ ಪ್ರಸ್ತಾಪಿಸಿದ್ದ 1 ಬಿಲಿಯನ್ ಡಾಲರ್ ಮೌಲ್ಯದ ಘಟಕವನ್ನು ಭಾರತ ಸರ್ಕಾರ ತಿರಸ್ಕರಿಸಿತ್ತು.
ಆಮದು ಮತ್ತು ಸೀಮಿತ ಸ್ಥಳೀಯ ಜೋಡಣೆಯನ್ನೇ ನೆಚ್ಚಿಕೊಂಡಿರುವ ಹಾಗೂ ಕೇವಲ ಪ್ರೀಮಿಯಂ ವಲಯಕ್ಕೆ ಸೀಮಿತವಾಗಿರುವುದು ಬಿವೈಡಿಯ ಬೆಳವಣಿಗೆಯನ್ನು ಸದ್ಯಕ್ಕೆ ಕುಂಠಿತಗೊಳಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಆಟ್ಟೋ 2 (Atto 2) ಎಸ್ಯುವಿಯಂತಹ ಕೈಗೆಟಕುವ ಬೆಲೆಯ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಮತ್ತೆ ಪ್ರಾಬಲ್ಯ ಸಾಧಿಸುವ ಯೋಚನೆಯಲ್ಲಿ ಚೀನಾ ಮೂಲದ ಕಂಪನಿಯಿದೆ.
ಇದನ್ನೂ ಓದಿ : ದಾವಣೆಗೆರೆ ಉದ್ಯಮಿಗೆ ಹನಿಟ್ರ್ಯಾಪ್.. 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಗ್ಯಾಂಗ್ ಅಂದರ್!


















