ಬೆಂಗಳೂರು: ಕೋಲಾರ ತಂಬಿಹಳ್ಳಿಯ ಮನ್ಮಾಧವ ತೀರ್ಥ ಮೂಲ ಮಹಾ ಸಂಸ್ಥಾನದ ಹಿರಿಯ ಪೀಠಾಧಿಪತಿಗಳಾಗಿದ್ದ ವಿದ್ಯಾಸಾಗರ ಮಾಧವ ತೀರ್ಥರು ಸೋಮವಾರ ರಾತ್ರಿ ಹರಿಪಾದ ಸೇರಿದ್ದಾರೆ.
ಮಜ್ಜಿಗೆಹಳ್ಳಿ ಮಠವೆಂದೇ ಪ್ರಖ್ಯಾತವಾಗಿದ್ದ ಮಠದ ಕಿರಿಯ ಪೀಠಾಧಿಪತಿಗಳಾಗಿ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ಧರ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಶ್ರೀಗಳು ಶ್ರೀರಾಮನವಮಿ ವಿಶೇಷ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ವಯೋಸಹಜ ಕಾರಣಗಳಿಂದ ಬಳಲಿದ್ದರು.
94 ವರ್ಷದ ವಿದ್ಯಾಸಾಗರ ಮಾಧವ ತೀರ್ಥರು ಪೂರ್ವಾಶ್ರಮದಲ್ಲಿ ಕಂಬಾಲೂರು ವೆಂಕಟೇಶಾಚಾರ್ ಆಗಿದ್ದ ಶ್ರೀಗಳು ಮಂತ್ರಾಲಯದಲ್ಲಿ ಸಂಸ್ಕೃತ ವಿದ್ಯಾಪೀಠದಲ್ಲಿ ಪ್ರಾಂಶುಪಾಲರಾಗಿ ಶಾಸ್ತ್ರ, ವೇದ್ಯಾಧ್ಯಯನ ನಡೆಸುವ ಮೂಲಕ ಪ್ರಖ್ಯಾತರಾಗಿದ್ದರು.
ಕಳೆದ 22 ವರ್ಷಗಳ ಹಿಂದೆ ವಿದ್ಯಾಸಾಗರ ಮಾಧವ ತೀರ್ಥರ ಪರಮಗುರುಗಳಾಗಿದ್ದ ಪ್ರಸನ್ನ ಶೂರ ಮಾಧವ ತೀರ್ಥರಿಂದ ಆಯ್ಕೆಯಾಗಿ ಮಠದ ಪೀಠಾಧಿಪತಿಗಳಾಗಿ ನೇಮಕಗೊಂಡಿದ್ದರು. ವಿದ್ಯಾಸಾಗರ ಮಾಧವ ತೀರ್ಥರು ಪೀಠಕ್ಕೆ ಬಂದ ನಂತರ ಧರ್ಮ ಪ್ರಚಾರದ ಜತೆ ಜತೆಗೆ ಹತ್ತು ಹಲವು ಯೋಜನೆಗಳ ಮೂಲಕ ಮಠದ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸರಳ ಜೀವಿ, ಭಕ್ತರಿಗೆ ಧರ್ಮ ಜಾಗೃತಿ ಬಗ್ಗೆ ಸುಲಲಿತವಾಗಿ ಪ್ರವಚಿಸುವ ಮೂಲಕ ಅಪಾರ ಭಕ್ತವೃಂದದ ಮನಗೆದಿದ್ದರು.
ಮಂಗಳವಾರ ಬೃಂದಾವನ: ಸೋಮವಾರ ಸಂಜೆ ಹರಿಪಾದ ಸೇರಿದ ಶ್ರೀ ವಿದ್ಯಾಸಾಗರ ಮಾಧವ ತೀರ್ಥರ ಬೃಂದಾವನ ನಿರ್ಮಾಣ ಕಾರ್ಯಗಳು ಮಂಗಳವಾರ ಮಧ್ಯಾಹ್ನ ನೆರವೇರಲಿದ್ದು, ಮಂಗಳವಾರ ಮಧ್ಯಾಹ್ನದವರೆಗೆ ಶ್ರೀಗಳ ದರ್ಶನಕ್ಕೆ ಅವಕಾಶ ಇರುತ್ತದೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.



















