ಪ್ರಯಾಗ್‌ರಾಜ್: ತಾಂತ್ರಿಕ ದೋಷದ ಕಾರಣದಿಂದಾಗಿ ಭಾರತೀಯ ವಾಯುಪಡೆಯ (IAF) ಮೈಕ್ರೋಲೈಟ್ ವಿಮಾನವೊಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ತುರ್ತು ಭೂಸ್ಪರ್ಶ ಮಾಡುವ ವೇಳೆ ಬುಧವಾರ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ವಿಶೇಷವೆಂದರೆ, ಸ್ಥಳೀಯ ನಿವಾಸಿಗಳು ಮತ್ತು ರಕ್ಷಣಾ ತಂಡಗಳ ಸಮಯಪ್ರಜ್ಞೆಯಿಂದಾಗಿ ಸುರಕ್ಷಿತವಾಗಿ ಪೈಲಟ್ ಗಳು ಹೊರಬಂದಿದ್ದು, ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯರು ಕೈಜೋಡಿಸಿರುವ ವಿಡಿಯೋ, ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಸರು ತುಂಬಿದ ಜೌಗು ಪ್ರದೇಶದಲ್ಲಿ ಲ್ಯಾಂಡಿಂಗ್
ಬಮ್ರೌಲಿ ವಾಯುನೆಲೆಯಿಂದ ತನ್ನ ದಿನನಿತ್ಯದ ತರಬೇತಿ ಹಾರಾಟವನ್ನು ಆರಂಭಿಸಿದ್ದ ಈ ಎರಡು ಆಸನಗಳ ಮೈಕ್ರೋಲೈಟ್ ವಿಮಾನವು ಮಧ್ಯಾಹ್ನ 12:15ರ ಸುಮಾರಿಗೆ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು. ಇದರಿಂದಾಗಿ ಪೈಲಟ್‌ಗಳು ವಿಮಾನವನ್ನು ಜನವಸತಿ ಇಲ್ಲದ ಜೌಗು ಪ್ರದೇಶದಲ್ಲಿ ಇಳಿಸಲು ಪ್ರಯತ್ನಿಸಿದರು. ಸೊಂಟದವರೆಗೆ ಕೆಸರು ಮತ್ತು ಜಲಸಸ್ಯಗಳಿಂದ ತುಂಬಿದ್ದ ಈ ಜೌಗು ಪ್ರದೇಶಕ್ಕೆ ವಿಮಾನವು ಅಪ್ಪಳಿಸಿದಾಗ ದೊಡ್ಡ ಶಬ್ದ ಕೇಳಿಸಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಹತ್ತಿರದ ಗ್ರಾಮಸ್ಥರು ವಿಮಾನದ ಬಳಿಗೆ ಧಾವಿಸಿ, ಕೆಸರಿನಲ್ಲಿ ಸಿಲುಕಿದ್ದ ಪೈಲಟ್‌ಗಳನ್ನು ಹೊರಕ್ಕೆ ಎಳೆದು ದಡಕ್ಕೆ ಸೇರಿಸಿದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಉಪ ಪೊಲೀಸ್ ಕಮಿಷನರ್ ಮನೀಶ್ ಶಾಂಡಿಲ್ಯ ಅವರ ನೇತೃತ್ವದಲ್ಲಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಆಗಮಿಸಿದವು. ಸ್ಥಳೀಯ ನಿವಾಸಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಯ ಜಂಟಿ ಕಾರ್ಯಾಚರಣೆಯ ಮೂಲಕ ಪೈಲಟ್‌ಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಕೆಸರು ತುಂಬಿದ ನೀರಿನಿಂದ ಪೈಲಟ್‌ಗಳನ್ನು ಮತ್ತು ವಿಮಾನದ ಅವಶೇಷಗಳನ್ನು ಹೊರತೆಗೆಯುವಲ್ಲಿ ಮುಳುಗುತಜ್ಞರು ಪ್ರಮುಖ ಪಾತ್ರ ವಹಿಸಿದರು. ಪೈಲಟ್‌ಗಳು ಸಮವಸ್ತ್ರದಲ್ಲಿ ಗ್ರಾಮಸ್ಥರ ಸಹಾಯದೊಂದಿಗೆ ಸುರಕ್ಷಿತವಾಗಿ ದಡಕ್ಕೆ ಬರುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತನಿಖೆಗೆ ವಾಯುಪಡೆ ಆದೇಶ
ಸಾಮಾನ್ಯವಾಗಿ ತರಬೇತಿ, ಹಕ್ಕಿಗಳ ಚಲನವಲನ ವೀಕ್ಷಣೆ ಮತ್ತು ಸಮೀಕ್ಷೆಗಾಗಿ ಬಳಸಲಾಗುವ ಈ ಮೈಕ್ರೋಲೈಟ್ ವಿಮಾನವು ತಾಂತ್ರಿಕ ದೋಷದಿಂದಾಗಿ ಅನಿವಾರ್ಯವಾಗಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಈ ಘಟನೆಯಿಂದ ನಾಗರಿಕ ಜೀವನ ಅಥವಾ ಆಸ್ತಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ವಾಯುಪಡೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ: ಉಡುಪಿ | ಬಾವಿಗೆ ಬಿದ್ದು ಗಂಡು ಚಿರತೆ ಸಾವು



















