ನವದೆಹಲಿ: ಜಗದೀಪ್ ಧನ್‌ಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಹುದ್ದೆಗೆ ಇಂದೇ ಹೊಸಬರ ಆಯ್ಕೆಯಾಗಲಿದೆ. ದೇಶದ ನೂತನ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಮತದಾನ ಪ್ರಕ್ರಿಯೆ ಬೆಳಗ್ಗೆಯೇ ಆರಂಭವಾಗಿದ್ದು, ಸಂಜೆಯೊಳಗೆ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಕಣದಲ್ಲಿದ್ದರೆ, ವಿಪಕ್ಷಗಳ ‘ಇಂಡಿಯಾ’ ಕೂಟದಿಂದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರು ಸ್ಪರ್ಧಿಸುತ್ತಿದ್ದಾರೆ.
ಸಂಸತ್ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊದಲಿಗರಾಗಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಸಂಜೆ 6 ಗಂಟೆಯ ನಂತರ ಮತ ಎಣಿಕೆ ಆರಂಭವಾಗಲಿದ್ದು, ಇಂದು ರಾತ್ರಿಯೊಳಗೆ ಫಲಿತಾಂಶ ಪ್ರಕಟವಾಗಲಿದೆ.
“ಇದು ಸಂವಿಧಾನವನ್ನು ಉಳಿಸುವ ಹೋರಾಟ” ಎಂದು ನ್ಯಾಯಮೂರ್ತಿ ರೆಡ್ಡಿ ಹೇಳಿದರೆ, “ಭಾರತೀಯ ರಾಷ್ಟ್ರೀಯತೆಯ ಗೆಲುವು ನಮ್ಮದಾಗಲಿದೆ” ಎಂದು ಸಿ.ಪಿ. ರಾಧಾಕೃಷ್ಣನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ನಿಂದ ತೆಲುಗು ಅಸ್ತ್ರ:
ಚುನಾವಣೆ ನಡೆಯುತ್ತಿರುವಂತೆಯೇ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ‘ತೆಲುಗು’ ಭಾವನಾತ್ಮಕ ಅಸ್ತ್ರವನ್ನು ಬಳಸಿದ್ದಾರೆ. ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿರುವ ತೆಲಂಗಾಣದ ಬಿಆರ್‌ಎಸ್ ಪಕ್ಷವು, ದಕ್ಷಿಣ ಭಾರತದ ಮತ್ತು ತೆಲುಗು ಭಾಷಿಕರಾದ ನ್ಯಾಯಮೂರ್ತಿ ರೆಡ್ಡಿ ಅವರಿಗೆ ಮತ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಸಂಖ್ಯಾಬಲ ಎಷ್ಟಿದೆ?
ಸಂಸತ್ತಿನ ಉಭಯ ಸದನಗಳಲ್ಲಿ ಎನ್‌ಡಿಎ 427 ಸಂಸದರನ್ನು ಹೊಂದಿದೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಬೆಂಬಲವೂ ಇರುವುದರಿಂದ ಗೆಲುವು ಸುಲಭವಾಗಲಿದೆ. ಬಿಆರ್‌ಎಸ್ ಮತ್ತು ಬಿಜೆಡಿ ಮತದಾನದಿಂದ ದೂರ ಉಳಿದಿರುವುದರಿಂದ ಗೆಲುವಿಗೆ 386 ಮತಗಳು ಸಾಕಾಗಲಿದೆ. ಆದರೂ, ಯಾವುದೇ ಅಡ್ಡ ಮತದಾನವನ್ನು ತಡೆಯಲು ಬಿಜೆಪಿ ಹಿರಿಯ ಸಚಿವರಾದ ಪ್ರಹ್ಲಾದ್ ಜೋಶಿ, ಪಿಯೂಷ್ ಗೋಯಲ್, ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವರಿಗೆ ಸಂಸದರನ್ನು ನಿಭಾಯಿಸುವ ಜವಾಬ್ದಾರಿ ನೀಡಲಾಗಿದೆ.
ಇನ್ನು, ‘ಇಂಡಿಯಾ’ ಕೂಟವು 315 ಮತಗಳನ್ನು ಹೊಂದಿದೆ. ಆಮ್ ಆದ್ಮಿ ಪಕ್ಷದ 12 ಸಂಸದರು ಬೆಂಬಲಿಸಿದರೂ ಗೆಲುವು ಕಷ್ಟಸಾಧ್ಯ.
ಚುನಾವಣೆಗೆ ಕಾರಣವೇನು?
ಹಾಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸಂಸತ್ ಮುಂಗಾರು ಅಧಿವೇಶನದ ಮೊದಲೇ ದಿನ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ ಕಾರಣ ಈ ಚುನಾವಣೆ ನಡೆಯುತ್ತಿದೆ. ಹೈಕೋರ್ಟ್ ನ್ಯಾಯಾಧೀಶರೊಬ್ಬರ ವಜಾ ನಿರ್ಣಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎನ್‌ಡಿಎ, ತಮಿಳುನಾಡಿನವರೇ ಆದ ಸಿ.ಪಿ. ರಾಧಾಕೃಷ್ಣನ್ ಅವರನ್ನು ತಮ್ಮ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಇದಕ್ಕೆ ಪ್ರತಿಯಾಗಿ, ವಿಪಕ್ಷಗಳು ತೆಲಂಗಾಣ ಮೂಲದ ನ್ಯಾಯಮೂರ್ತಿ ರೆಡ್ಡಿ ಅವರನ್ನು ಕಣಕ್ಕಿಳಿಸಿವೆ.