ಕಾರವಾರ: ಕಟ್ಟಡ ಕಾರ್ಮಿಕನಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದಲ್ಲಿ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಕಟ್ಟಡ ಕಾರ್ಮಿಕ ಜಸ್ತಿ ಮಂಡಾಲ್(50) ಸಾವನ್ನಪ್ಪಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿರುವ ವ್ಯಕ್ತಿ ನೌಕಾನೆಲೆಯಲ್ಲಿ ಎನ್ ಎನ್ ಟಿ ಕಂಪನಿಯಡಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ರಾತ್ರಿ ವೇಳೆ ತಮ್ಮ ಕೆಲಸ ಮುಗಿಸಿ ಮರಳಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರನ್ನು ಕರೆದೊಯ್ಯಲು ಟೆಂಪೋ ಬಂದಿತ್ತು. ನೌಕಾನೆಲೆ ಪ್ರಮುಖ ಗೇಟ್ ವಾಟರ್ ಪಾಯಿಂಟ್ ಬಳಿಯಿಂದ ಕಾರ್ಮಿಕರನ್ನು ಕರೆದೊಯ್ಯಲಾಗುತ್ತಿತ್ತು. ಆಗ ಕಾರ್ಮಿಕರು ಅವಸರದಿಂದ ಹತ್ತಲು ಮುಂದಾಗಿದ್ದಾರೆ. ಆ ವೇಳೆ ನೂಕು ನುಗ್ಗಲು ಉಂಟಾಗಿದೆ.
ಚಾಲಕ ಅಜಯ್ ಟೆಂಪೋ ಮುಂದಕ್ಕೆ ಚಲಾಯಿಸಿದ್ದಾನೆ. ಆಗ ಚಾಲಕನಿಗೆ ನಿಯಂತ್ರಣ ಸಿಗದೆ ಎದುರಿದ್ದ ಕಾರ್ಮಿಕ ಜಸ್ತಿ ಮಂಡಾಲ್‌ಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಕುಟುಂಬಸ್ಥರು ಹಾಗೂ ಇತರ ಕಾರ್ಮಿಕರು ಪ್ರತಿಭಟನೆ ನಡೆಸಿ, ಕಾರ್ಮಿಕನ ಕುಟುಂಬಸ್ಥರಿಗೆ 20 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.