ವಾಷಿಂಗ್ಟನ್: ಇರಾನ್‌ನೊಂದಿಗೆ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ವ್ಯಾಪಾರ ನಡೆಸಿದ ಆರೋಪದ ಮೇಲೆ ಅಮೆರಿಕ ಸರ್ಕಾರವು ಭಾರತದ ಆರು ಕಂಪನಿಗಳು ಸೇರಿದಂತೆ ಒಟ್ಟು 20 ಸಂಸ್ಥೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಈ ಕಂಪನಿಗಳು ಇರಾನ್ ಮೂಲದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅಮೆರಿಕದ ಕಾರ್ಯನಿರ್ವಾಹಕ ಆದೇಶ 13846 ಅನ್ನು ಉಲ್ಲಂಘಿಸಿವೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ.
ಇರಾನ್ ಸರ್ಕಾರವು ತನಗೆ ಬರುವ ಆದಾಯವನ್ನು ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಹೆಚ್ಚಿಸಲು, ಭಯೋತ್ಪಾದನೆಗೆ ಹಣಕಾಸು ಒದಗಿಸಲು ಮತ್ತು ತನ್ನದೇ ಜನರ ಮೇಲೆ ದಬ್ಬಾಳಿಕೆ ನಡೆಸಲು ಬಳಸುತ್ತಿದೆ ಎನ್ನುವುದು ಅಮೆರಿಕದ ವಾದ. ಈ ಆದಾಯದ ಹರಿವನ್ನು ತಡೆಯುವ ಉದ್ದೇಶದಿಂದಲೇ ಈ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ನಿರ್ಬಂಧಕ್ಕೆ ಒಳಗಾದ ಭಾರತೀಯ ಕಂಪನಿಗಳು ಯಾವುವು?:
ಆಲ್ಕೆಮಿಕಲ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್: ಜನವರಿ ಮತ್ತು ಡಿಸೆಂಬರ್ 2024ರ ನಡುವೆ 84 ದಶಲಕ್ಷ ಡಾಲರ್‌ಗೂ ಹೆಚ್ಚು ಮೌಲ್ಯದ ಇರಾನ್ ಮೂಲದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ.
ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್: ಜುಲೈ 2024 ಮತ್ತು ಜನವರಿ 2025ರ ನಡುವೆ 51 ದಶಲಕ್ಷ ಡಾಲರ್‌ಗೂ ಹೆಚ್ಚು ಮೌಲ್ಯದ ಇರಾನ್ ಉತ್ಪನ್ನಗಳನ್ನು (ಮೀಥನಾಲ್ ಸೇರಿದಂತೆ) ಖರೀದಿಸಿದೆ.
ಜ್ಯೂಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್: ಜನವರಿ 2024 ಮತ್ತು ಜನವರಿ 2025ರ ನಡುವೆ 49 ದಶಲಕ್ಷ ಡಾಲರ್‌ಗೂ ಹೆಚ್ಚು ಮೌಲ್ಯದ ಇರಾನ್ ಮೂಲದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು (ಟೊಲ್ಯುಯೀನ್ ಸೇರಿದಂತೆ) ಆಮದು ಮಾಡಿಕೊಂಡಿದೆ.
ರಾಮ್ನಿಕ್ಲಾಲ್ ಎಸ್ ಗೋಸಾಲಿಯಾ ಅಂಡ್ ಕಂಪನಿ: ಜನವರಿ 2024 ಮತ್ತು ಜನವರಿ 2025ರ ನಡುವೆ 22 ದಶಲಕ್ಷ ಡಾಲರ್‌ಗೂ ಹೆಚ್ಚು ಮೌಲ್ಯದ ಇರಾನ್ ಉತ್ಪನ್ನಗಳನ್ನು (ಮೀಥನಾಲ್ ಮತ್ತು ಟೊಲ್ಯುಯೀನ್ ಸೇರಿದಂತೆ) ಖರೀದಿಸಿದೆ.
ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್: ಅಕ್ಟೋಬರ್ ಮತ್ತು ಡಿಸೆಂಬರ್ 2024ರ ನಡುವೆ ಯುಎಇ ಮೂಲದ ಕಂಪನಿ ಮೂಲಕ ಸುಮಾರು 14 ದಶಲಕ್ಷ ಡಾಲರ್ ಮೌಲ್ಯದ ಇರಾನ್ ಮೂಲದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ.
ಕಾಂಚನ್ ಪಾಲಿಮರ್ಸ್: 1.3 ದಶಲಕ್ಷ ಡಾಲರ್‌ಗೂ ಹೆಚ್ಚು ಮೌಲ್ಯದ ಇರಾನ್ ಮೂಲದ ಪಾಲಿಥಿಲೀನ್‌ನಂತಹ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ.
ನಿರ್ಬಂಧದ ಪರಿಣಾಮಗಳು:
ಈ ನಿರ್ಬಂಧಗಳ ಅಡಿಯಲ್ಲಿ, ಅಮೆರಿಕದಲ್ಲಿರುವ ಈ ಕಂಪನಿಗಳ ಎಲ್ಲಾ ಆಸ್ತಿಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಇದಲ್ಲದೆ, ಅಮೆರಿಕದ ಯಾವುದೇ ವ್ಯಕ್ತಿಗಳು ಅಥವಾ ಸಂಸ್ಥೆಗಳು ಈ ಕಂಪನಿಗಳೊಂದಿಗೆ ಯಾವುದೇ ರೀತಿಯ ಹಣಕಾಸು, ಸರಕು ಅಥವಾ ಸೇವೆಗಳ ವಹಿವಾಟು ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. “ಶಿಕ್ಷಿಸುವುದು ನಮ್ಮ ಗುರಿಯಲ್ಲ, ಬದಲಿಗೆ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆ ತರುವುದೇ ನಮ್ಮ ಉದ್ದೇಶ” ಎಂದು ಅಮೆರಿಕ ಹೇಳಿದೆ.



















