ವಾಷಿಂಗ್ಟನ್: ಫ್ಲೋರಿಡಾದಲ್ಲಿ ಭಾರತೀಯ ಮೂಲದ ಟ್ರಕ್ ಚಾಲಕನೊಬ್ಬನಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆಯ ಬೆನ್ನಲ್ಲೇ, ಅಮೆರಿಕ ಸರ್ಕಾರವು ವಿದೇಶಿ ಟ್ರಕ್ ಚಾಲಕರಿಗೆ ನೀಡಲಾಗುತ್ತಿದ್ದ ಉದ್ಯೋಗ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ. ಟ್ರಕ್ ಅಪಘಾತ ಪ್ರಕರಣದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಕಠಿಣ ಕ್ರಮ ತೆಗೆದುಕೊಂಡಿದೆ.
ಏನಿದು ಘಟನೆ?
ಫ್ಲೋರಿಡಾದ ಹೆದ್ದಾರಿಯೊಂದರಲ್ಲಿ ಹರ್ಜಿಂದರ್ ಸಿಂಗ್ ಎಂಬ ಭಾರತೀಯ ಮೂಲದ ಚಾಲಕ, ನಿಯಮ ಮೀರಿ ‘ಯೂ-ಟರ್ನ್’ ತೆಗೆದುಕೊಳ್ಳುವಾಗ ಈ ದುರಂತ ಸಂಭವಿಸಿದೆ. ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಫೆಡರಲ್ ಅಧಿಕಾರಿಗಳ ಪ್ರಕಾರ, ಹರ್ಜಿಂದರ್ ಸಿಂಗ್ ಮೆಕ್ಸಿಕೋ ಗಡಿಯ ಮೂಲಕ ಅಕ್ರಮವಾಗಿ ಅಮೆರಿಕವನ್ನು ಪ್ರವೇಶಿಸಿದ್ದ. ಅಪಘಾತದ ನಂತರ ನಡೆಸಿದ ಪರೀಕ್ಷೆಯಲ್ಲಿ ಆತ ಇಂಗ್ಲಿಷ್ ಭಾಷೆಯಲ್ಲಿ ಅನುತ್ತೀರ್ಣನಾಗಿದ್ದ ಎಂದೂ ತಿಳಿದುಬಂದಿದೆ. ಈ ಘಟನೆಯು ಅಮೆರಿಕದಾದ್ಯಂತ ಮಾಧ್ಯಮಗಳ ಗಮನ ಸೆಳೆದಿದ್ದು, ರಾಜಕೀಯ ಆಯಾಮವನ್ನೂ ಪಡೆದುಕೊಂಡಿದೆ.
ವೀಸಾ ಸ್ಥಗಿತ ಘೋಷಣೆ:
ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರು, “ವಾಣಿಜ್ಯ ಟ್ರಕ್ ಚಾಲಕರಿಗೆ ನೀಡಲಾಗುವ ಎಲ್ಲಾ ಉದ್ಯೋಗ ವೀಸಾಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗುತ್ತಿದೆ,” ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. “ಅಮೆರಿಕದ ರಸ್ತೆಗಳಲ್ಲಿ ವಿದೇಶಿ ಚಾಲಕರ ಸಂಖ್ಯೆ ಹೆಚ್ಚುತ್ತಿರುವುದು ಅಮೆರಿಕನ್ನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದೆ ಮತ್ತು ಸ್ಥಳೀಯ ಟ್ರಕ್ಕರ್‌ಗಳ ಜೀವನೋಪಾಯಕ್ಕೆ ಧಕ್ಕೆ ತರುತ್ತಿದೆ,” ಎಂದು ಅವರು ಬರೆದಿದ್ದಾರೆ.
ರಿಪಬ್ಲಿಕನ್-ಡೆಮಾಕ್ರಾಟ್ ನಡುವೆ ವಾಕ್ಸಮರ:
ಈ ಘಟನೆಯು ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಮತ್ತು ಡೆಮಾಕ್ರಾಟಿಕ್ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಆರೋಪಿ ಚಾಲಕ ಹರ್ಜಿಂದರ್ ಸಿಂಗ್‌ಗೆ ಡೆಮಾಕ್ರಾಟ್ ಆಡಳಿತವಿರುವ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿ ವಾಣಿಜ್ಯ ಚಾಲನಾ ಪರವಾನಗಿ ನೀಡಲಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಟ್ರಂಪ್ ಆಡಳಿತವು, “ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಅವರೇ ಈ ಘಟನೆಗೆ ಹೊಣೆ,” ಎಂದು ಆರೋಪಿಸಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ನ್ಯೂಸಮ್ ಕಚೇರಿ, “ಸಿಂಗ್‌ಗೆ ಕೆಲಸದ ಪರವಾನಗಿ (Work Permit) ನೀಡಿದ್ದು ಟ್ರಂಪ್ ನೇತೃತ್ವದ ಫೆಡರಲ್ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ,” ಎಂದು ಸ್ಪಷ್ಟಪಡಿಸಿದೆ.
ವಿದೇಶಿ ಚಾಲಕರ ವಿರುದ್ಧ ಹೆಚ್ಚುತ್ತಿರುವ ಆಕ್ರೋಶ
ಈ ಅಪಘಾತಕ್ಕೂ ಮುನ್ನವೇ, ರಿಪಬ್ಲಿಕನ್ ಪಕ್ಷದ ಶಾಸಕರು ವಿದೇಶಿ ಟ್ರಕ್ ಚಾಲಕರನ್ನು ಗುರಿಯಾಗಿಸಿಕೊಂಡಿದ್ದರು. ವಲಸಿಗ ಚಾಲಕರಿಂದ ಅಪಘಾತಗಳು ಹೆಚ್ಚುತ್ತಿವೆ ಎಂದು ಅವರು ವಾದಿಸುತ್ತಿದ್ದರು. ಜೂನ್ ತಿಂಗಳಲ್ಲಿ, ಸಾರಿಗೆ ಸಚಿವ ಸೀನ್ ಡಫ್ಫಿ ಅವರು, “ಟ್ರಕ್ ಚಾಲಕರು ಇಂಗ್ಲಿಷ್ ಮಾತನಾಡಬೇಕು,” ಎಂಬ ಹೊಸ ನಿರ್ದೇಶನವನ್ನು ಹೊರಡಿಸಿದ್ದರು. ಇದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಕಾಲದಲ್ಲಿದ್ದ, ಕೇವಲ ಭಾಷೆಯ ಕಾರಣಕ್ಕೆ ಚಾಲಕರನ್ನು ಕೆಲಸದಿಂದ ತೆಗೆಯಬಾರದು ಎಂಬ ಮಾರ್ಗಸೂಚಿಯನ್ನು ರದ್ದುಗೊಳಿಸಿತ್ತು.
ವಿದೇಶಿ ಚಾಲಕರ ಸಂಖ್ಯೆಯಲ್ಲಿ ಭಾರೀ ಏರಿಕೆ
ಅಮೆರಿಕದಲ್ಲಿ ಟ್ರಕ್ ಚಾಲಕರ ಬೇಡಿಕೆ ಹೆಚ್ಚುತ್ತಿದ್ದು, ಅಂಕಿಅಂಶಗಳ ಪ್ರಕಾರ, 2000 ರಿಂದ 2021ರ ನಡುವೆ ವಿದೇಶಿ ಮೂಲದ ಚಾಲಕರ ಸಂಖ್ಯೆ ದ್ವಿಗುಣಗೊಂಡಿದೆ. ಪ್ರಸ್ತುತ ದೇಶದಲ್ಲಿರುವ 7,20,000 ಟ್ರಕ್ ಚಾಲಕರಲ್ಲಿ ಶೇ. 18ರಷ್ಟು ಮಂದಿ ವಿದೇಶಿ ಮೂಲದವರಾಗಿದ್ದಾರೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಚಾಲಕರು ಲ್ಯಾಟಿನ್ ಅಮೆರಿಕದಿಂದ ಬಂದವರಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಉಕ್ರೇನ್ ಸೇರಿದಂತೆ ಪೂರ್ವ ಯುರೋಪಿಯನ್ ದೇಶಗಳಿಂದ ಬರುವವರ ಸಂಖ್ಯೆಯೂ ಹೆಚ್ಚಾಗಿದೆ.