ವಾಷಿಂಗ್ಟನ್: ಅಮೆರಿಕದ ಮಿನ್ನೇಸೋಟಾದಲ್ಲಿ ಫೆಡರಲ್ ಏಜೆಂಟ್‌ಗಳು 5 ವರ್ಷದ ಶಾಲಾ ಬಾಲಕ ಲಿಯಾಮ್ ಕೊನೆಜೊ ರಾಮೋಸ್ ಎಂಬಾತನನ್ನು ಆತನ ತಂದೆಯೊಂದಿಗೆ ಬಂಧಿಸಿ ಟೆಕ್ಸಾಸ್‌ನ ಬಂಧನ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಈ ಘಟನೆಯು ಸ್ಥಳೀಯವಾಗಿ ಭಾರೀ ಸಂಚಲನ ಮೂಡಿಸಿದ್ದು, ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.

ಇತರರನ್ನು ಮನೆಯಿಂದ ಹೊರಗೆ ಬರುವಂತೆ ಸೆಳೆಯಲು ಬಾಲಕನನ್ನು ‘ಬೆಟ್’ (Bait-ಆಮಿಷ)ನಂತೆ ಬಳಸಿಕೊಳ್ಳಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಗಂಭೀರ ಆರೋಪ ಮಾಡಿದೆ. ಮಂಗಳವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಮನೆಯ ಮುಂದಿನ ರಸ್ತೆಯಲ್ಲೇ ಈ ಕಾರ್ಯಾಚರಣೆ ನಡೆದಿದೆ. ಅಧಿಕಾರಿಗಳು ಬಾಲಕನಿಗೆ ಮನೆಯ ಬಾಗಿಲು ಬಡಿಯುವಂತೆ ಸೂಚಿಸಿ, ಮನೆಯೊಳಗೆ ಇತರರು ಯಾರಿದ್ದಾರೆ ಎಂದು ನೋಡಲು ಬಳಸಿಕೊಂಡಿದ್ದಾರೆ ಎಂದು ಕೊಲಂಬಿಯಾ ಹೈಟ್ಸ್ ಶಾಲಾ ಮೇಲ್ವಿಚಾರಕಿ ಜೆನಾ ಸ್ಟೆನ್ವಿಕ್ ತಿಳಿಸಿದ್ದಾರೆ.
ಪರ-ವಿರೋಧ ಚರ್ಚೆ
ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಇಲಾಖೆಯ ವಕ್ತಾರರು, ತಮಗೂ ಮಗುವಿಗೂ ಯಾವುದೇ ಸಂಬಂಧವಿಲ್ಲ. ತಾವು ಮಗುವಿನ ತಂದೆ ಆಡ್ರಿಯನ್ ಅಲೆಕ್ಸಾಂಡರ್ ಕೊನೆಜೊ ಅರಿಯಾಸ್ ಎಂಬಾತನನ್ನು ಬಂಧಿಸಲು ಬಂದಿದ್ದೆವು ಎಂದು ಹೇಳಿದ್ದಾರೆ. ತಂದೆಯು ಮಗುವನ್ನು ಬಿಟ್ಟು ಓಡಿಹೋಗಲು ಯತ್ನಿಸಿದಾಗ ಮಗುವಿನ ಸುರಕ್ಷತೆಗಾಗಿ ಅಧಿಕಾರಿಗಳು ಜೊತೆಗಿದ್ದರು ಎಂದು ಇಲಾಖೆ ಸಮರ್ಥಿಸಿಕೊಂಡಿದೆ. ಆದರೆ, ಮಗುವಿನ ತಂದೆ ಓಡಿ ಹೋಗಿರಲಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವಾದಿಸಿದೆ. ಅಲ್ಲದೆ, ಮಗುವನ್ನು ಬೇರೆ ಸಂಬಂಧಿಕರ ಅಥವಾ ನೆರೆಹೊರೆಯವರ ವಶಕ್ಕೆ ನೀಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಅದನ್ನು ತಿರಸ್ಕರಿಸಿ ತಂದೆ-ಮಗ ಇಬ್ಬರನ್ನೂ ಟೆಕ್ಸಾಸ್‌ನ ಡಿಲ್ಲಿಯಲ್ಲಿರುವ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಟ್ರಂಪ್ ಆಡಳಿತದ ಬಗ್ಗೆ ಹೆಚ್ಚುತ್ತಿರುವ ಆತಂಕ
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಈ ಬಗ್ಗೆ ಪ್ರತಿಕ್ರಿಯಿಸಿ, ಕಾನೂನುಬಾಹಿರವಾಗಿ ವಾಸಿಸುತ್ತಿರುವವರನ್ನು ಬಂಧಿಸುವಾಗ ಮಗುವನ್ನು ಚಳಿಯಲ್ಲಿ ಬಿಡಲು ಸಾಧ್ಯವಿಲ್ಲ, ಹಾಗಾಗಿ ಮಗುವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳ ಕ್ರಮವನ್ನು ಬೆಂಬಲಿಸಿದ್ದಾರೆ. ಆದರೆ, ಬಂಧನ ಕೇಂದ್ರಗಳಲ್ಲಿ ಮಕ್ಕಳ ಪರಿಸ್ಥಿತಿ ದಯನೀಯವಾಗಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಮಿನ್ನೇಸೋಟದಲ್ಲಿ ಕಳೆದ ಆರು ವಾರಗಳಲ್ಲಿ ಸುಮಾರು 3,000 ವಲಸಿಗರನ್ನು ಬಂಧಿಸಲಾಗಿದ್ದು, ಇದರಿಂದ ಶಾಲಾ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಭೀತಿ ಆವರಿಸಿದೆ. ಶಾಲಾ ಬಸ್‌ಗಳನ್ನು ಹಿಂಬಾಲಿಸುವುದು ಮತ್ತು ಪಾರ್ಕಿಂಗ್ ಲಾಟ್‌ಗಳಲ್ಲಿ ಮಕ್ಕಳನ್ನು ವಶಕ್ಕೆ ಪಡೆಯುತ್ತಿರುವ ಕ್ರಮದಿಂದಾಗಿ ಅನೇಕ ವಿದ್ಯಾರ್ಥಿಗಳು ಶಾಲೆಗೆ ಬರಲು ಹೆದರುತ್ತಿದ್ದಾರೆ ಎಂದು ಶಾಲಾ ಮಂಡಳಿ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಪ್ರಧಾನಿ ನಂತರ ಗಂಭೀರ್ ಅವರದ್ದೇ ಅತ್ಯಂತ ಕಠಿಣ ಕೆಲಸ” | ಟೀಮ್ ಇಂಡಿಯಾ ಕೋಚ್ ಬೆಂಬಲಕ್ಕೆ ನಿಂತ ಶಶಿ ತರೂರ್!



















