ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ವರದಕ್ಷಿಣೆ ಕಿರುಕುಳದ ಪ್ರಕರಣ ಬೆಳಕಿಗೆ ಬಂದಿದ್ದು, ಕಳೆದೊಂದು ವಾರದಲ್ಲಿ ಇಂತಹ 3 ಪ್ರಕರಣಗಳು ಒಂದೇ ರಾಜ್ಯದಲ್ಲಿ ವರದಿಯಾಗಿವೆ. ಉ.ಪ್ರದೇಶದ ಅಮ್ರೋಹಾದಲ್ಲಿ ವರದಕ್ಷಿಣೆ ಬೇಡಿಕೆ ಈಡೇರಿಸಲಿಲ್ಲ ಎಂಬ ಕಾರಣಕ್ಕೆ ಅತ್ತೆ-ಮಾವಂದಿರು ಬಲವಂತವಾಗಿ ಸೊಸೆಗೆ ಆ್ಯಸಿಡ್ ಕುಡಿಸಿದ ಪರಿಣಾಮ, ಮಹಿಳೆಯೊಬ್ಬರು 17 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ಕೊನೆಗೆ ಅಸುನೀಗಿದ್ದಾರೆ.
ಮೃತ ಮಹಿಳೆಯನ್ನು ಗುಲ್ ಫಿಜಾ ಎಂದು ಗುರುತಿಸಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ಅಮ್ರೋಹಾದ ಕಲಾ ಖೇಡಾ ಗ್ರಾಮದ ಪರ್ವೇಜ್ ಎಂಬಾತನೊಂದಿಗೆ ಗುಲ್ ಫಿಜಾ ಅವರ ವಿವಾಹವಾಗಿತ್ತು. ಮದುವೆಯಾದ ದಿನದಿಂದಲೂ ಪತಿ, ಅತ್ತೆ-ಮಾವ ಮತ್ತು ಇತರ ಕುಟುಂಬ ಸದಸ್ಯರು ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಗುಲ್ ಫಿಜಾ ಅವರ ತಂದೆ ಫುರ್ಕಾನ್ ದೂರಿನಲ್ಲಿ ತಿಳಿಸಿದ್ದಾರೆ.
ಆಗಸ್ಟ್ 11 ರಂದು ಕಿರುಕುಳವು ಕ್ರೂರ ಸ್ವರೂಪ ಪಡೆದುಕೊಂಡಿದ್ದು, ಗುಲ್ ಫಿಜಾ ಅವರಿಗೆ ಅವರ ಅತ್ತೆಯ ಮನೆಯವರು ಬಲವಂತವಾಗಿ ಆ್ಯಸಿಡ್ ಕುಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣವೇ ಮೊರಾದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು 17 ದಿನಗಳ ಕಾಲ ಚಿಕಿತ್ಸೆ ಪಡೆದರೂ, ವೈದ್ಯರ ಪ್ರಯತ್ನಗಳು ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.
ಈ ಘಟನೆಯ ಬಗ್ಗೆ ಸಂತ್ರಸ್ತೆಯ ತಂದೆ ದೂರು ನೀಡಿದ ನಂತರ, ಪೊಲೀಸರು ಪತಿ ಪರ್ವೇಜ್ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಮತ್ತು ಇತರ ಸಂಬಂಧಿತ ಆರೋಪಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಗುಲ್ ಫಿಜಾ ಅವರ ಮರಣದ ನಂತರ, ಆರೋಪಿಗಳ ವಿರುದ್ಧ ಕೊಲೆ ಆರೋಪವನ್ನು ಸೇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. “ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕೊಲೆ ಆರೋಪಗಳನ್ನು ಸೇರಿಸಲಾಗುವುದು. ಪೊಲೀಸರು ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ” ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.



















