ಲಕ್ನೋ: ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿಕೊಡುವ ಮೂಲಕ ವ್ಯಕ್ತಿಯೊಬ್ಬ ಹೃದಯ ವೈಶಾಲ್ಯತೆ ಮೆರೆದ ಘಟನೆ(Viral News) ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ನಡೆದಿದೆ.
ಬಬ್ಲೂ ಎಂಬ ವ್ಯಕ್ತಿಯೇ ಈ ತ್ಯಾಗಮಯಿ. ಈತ ತನ್ನ ಹೆಂಡತಿಯು ಬೇರೊಬ್ಬನನ್ನು ಪ್ರೀತಿಸುತ್ತಿರುವ ಬಗ್ಗೆ ತಿಳಿದ ಕೂಡಲೇ ಅವಳಿಗೆ ಅವಳ ಪ್ರೇಮಿಯೊಂದಿಗೆ ಮದುವೆ ಮಾಡಿಸಲು ನಿರ್ಧರಿಸಿದ್ದಲ್ಲದೇ, ತನ್ನ ಇಬ್ಬರು ಮಕ್ಕಳನ್ನೂ ಇನ್ನು ಮುಂದೆ ತಾನೇ ನೋಡಿಕೊಳ್ಳುವುದಾಗಿಯೂ ಹೇಳಿದ್ದಾನೆ. ಇದಕ್ಕೆ ಬಬ್ಲೂ ಪತ್ನಿಯೂ ಒಪ್ಪಿಕೊಂಡಿದ್ದಾಳೆ.
ಬಬ್ಲೂ ಮತ್ತು ರಾಧಿಕಾ 2017ರಲ್ಲಿ ವಿವಾಹವಾಗಿದ್ದು, ದಂಪತಿಗೆ 7 ಮತ್ತು 9 ವರ್ಷದ ಇಬ್ಬರು ಮಕ್ಕಳಿದ್ದಾರೆ. ಬಬ್ಲೂ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪತ್ನಿ ರಾಧಿಕಾ ಅದೇ ಗ್ರಾಮದ ಯುವಕನೊಬ್ಬನನ್ನು ಪ್ರೇಮಿಸತೊಡಗಿದ್ದಳು. ದೀರ್ಘಕಾಲದಿಂದ ಇವರ ಲವ್ವಿ-ಡವ್ವಿ ಮುಂದುವರಿದಿತ್ತು. ರಾಧಿಕಾ ಬೇರೊಬ್ಬನೊಂದಿಗೆ ಸಂಬಂಧ ಹೊಂದಿರುವ ವಿಚಾರ ಬಬ್ಲೂ ಕುಟುಂಬ ಸದಸ್ಯರಿಗೆ ಗೊತ್ತಾಯಿತು. ಅವರು ಈ ವಿಚಾರವನ್ನು ಬಬ್ಲೂಗೆ ತಿಳಿಸಿದರು.

ಈ ಸಮಸ್ಯೆ ಬಗೆಹರಿಸಲು ಬಬ್ಲೂ ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಬಬ್ಲೂ ತನ್ನ ಹೆಂಡತಿಯು ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದನು.
ಇದಾದ ಕೆಲವು ದಿನಗಳ ಬಳಿಕ, ಈ ಪ್ರಕರಣಕ್ಕೆ ಅನಿರೀಕ್ಷಿತ ಟ್ವಿಸ್ಟ್ ಎಂಬಂತೆ, ಪತ್ನಿ ರಾಧಿಕಾಳನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿಕೊಡುವ ನಿರ್ಧಾರಕ್ಕೆ ಬಬ್ಲೂ ಬಂದನು. ಈ ವಿಚಾರವನ್ನು ಆಕೆಗೂ ತಿಳಿಸಿದ ಬಬ್ಲೂ ಮೊದಲಿಗೆ ನ್ಯಾಯಾಲಯಕ್ಕೆ ಹೋಗಿ, ತನ್ನ ಹೆಂಡತಿ ಮತ್ತು ಅವಳ ಪ್ರೇಮಿಯ ಮದುವೆಯನ್ನು ನೆರವೇರಿಸಿದನು. ನಂತರ ಅವರಿಬ್ಬರನ್ನೂ ದೇವಾಲಯಕ್ಕೆ ಕರೆದೊಯ್ದು, ಅಲ್ಲಿ ಅವರಿಬ್ಬರಿಗೂ ಮತ್ತೊಮ್ಮೆ ಸಾಂಪ್ರದಾಯಿಕವಾಗಿ ಮದುವೆ ಮಾಡಿಸಿದನು. ರಾಧಿಕಾ ಮತ್ತು ಪ್ರಿಯಕರ ಹೂಮಾಲೆ ಬದಲಿಸಿಕೊಂಡು, ಮದುವೆಯ ಪ್ರತಿಜ್ಞೆಗಳನ್ನೂ ಸ್ವೀಕರಿಸಿದರು.
ಇದಾದ ಬಳಿಕ ಬಬ್ಲೂ, ನನ್ನ ಇಬ್ಬರು ಮಕ್ಕಳನ್ನು ನಾನೇ ಇಟ್ಟುಕೊಳ್ಳುತ್ತೇನೆ. ಅವರು ನನ್ನ ಸುಪರ್ದಿಯಲ್ಲಿಯೇ ಇರಲಿ. ಅವರನ್ನು ನಾನೇ ನೋಡಿಕೊಳ್ಳಲು ಬಯಸುತ್ತೇನೆ ಎಂದು ರಾಧಿಕಾಗೆ ಕೇಳಿಕೊಂಡಿದ್ದು, ಅದಕ್ಕೆ ಆಕೆಯೂ ಒಪ್ಪಿಗೆ ನೀಡಿದಳು. ಇಲ್ಲಿಗೆ ಈ ಪ್ರಕರಣ ಸುಖಾಂತ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.