ಬೆಂಗಳೂರು: ಆಧಾರ್ ಕಾರ್ಡ್ ಈಗ ದೇಶದ ನಾಗರಿಕರ ಪ್ರಮುಖ ಗುರುತಿನ ಚೀಟಿಯಾಗಿದೆ. ಅದರಲ್ಲೂ, ಸರ್ಕಾರದ ಯೋಜನೆಗಳ ಲಾಭ ಪಡೆಯುವುದರಿಂದ ಬ್ಯಾಂಕ್ ಖಾತೆ ತೆರೆಯುವವರೆಗೆ ಪ್ರತಿಯೊಂದು ಚಟುವಟಿಕೆಗಳಿಗೂ ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ. ಹೀಗೆ ಸಾರ್ವಜನಿಕ ಆಧಾರ್ ಕಾರ್ಡ್ ಪ್ರತಿಯೊಂದಕ್ಕೂ ಬಳಕೆಯಾಗುತ್ತಿರುವ ಕಾರಣ ಡೇಟಾ ಸುರಕ್ಷತೆ, ಆಧಾರ್ ಕಾರ್ಡ್ ದುರ್ಬಳಕೆ ಕುರಿತು ಅನುಮಾನಗಳು ಸೃಷ್ಟಿಯಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಹೊಸ ಮಾದರಿಯ ಆಧಾರ್ ಕಾರ್ಡ್ ಪರಿಚಯಿಸಲು ಮುಂದಾಗಿದೆ.
ಹೌದು, ಡಿಸೆಂಬರ್ ನಲ್ಲಿಯೇ ಹೊಸ ವಿನ್ಯಾಸದ ಆಧಾರ್ ಕಾರ್ಡ್ ಗಳು ಬರಲಿವೆ ಎಂದು ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಹೊಸ ಕಾರ್ಡಿನಲ್ಲಿ ವ್ಯಕ್ತಿಯ ಫೋಟೊ ಹಾಗೂ ಕ್ಯೂಆರ್ ಕೋಡ್ ಮಾತ್ರ ಇರಲಿದೆ. ಹೊಸ ಕಾರ್ಡ್ ನಲ್ಲಿ ವ್ಯಕ್ತಿಯ ಹೆಸರು, ವಿಳಾಸ, ಜನ್ಮದಿನಾಂಕ ಮತ್ತು ಆಧಾರ್ ನಂಬರ್ ಇರುವುದಿಲ್ಲ. ಕಾರ್ಡ್ನಲ್ಲಿ ಕೇವಲ ವ್ಯಕ್ತಿಯ ಫೋಟೋ ಮತ್ತು ಕ್ಯೂಆರ್ ಕೋಡ್ ಮಾತ್ರ ಇರುವಂತೆ ವಿನ್ಯಾಸ ಮಾಡಲಾಗುತ್ತದೆ.
ಅಷ್ಟೇ ಅಲ್ಲ, ಇನ್ನುಮುಂದೆ ಆಧಾರ್ ಆಧಾರಿತ ಗುರುತಿನ ಪರಿಶೀಲನೆ ಆನ್ಲೈನ್ನಲ್ಲಿ ಮಾತ್ರ ಸಾಧ್ಯ. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳು ಮಾತ್ರ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಯುಐಡಿಎಐ ಡೇಟಾಬೇಸ್ ನಿಂದ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಅಗತ್ಯ ವಿವರಗಳನ್ನು ಪಡೆಯಲು ಅವಕಾಶ ಇರುತ್ತದೆ. ಹೀಗಾಗಿ ಅನಧಿಕೃತ ವ್ಯಕ್ತಿಗಳು ಕಾರ್ಡ್ ಮೂಲಕ ಯಾವುದೇ ಮಾಹಿತಿಯನ್ನು ಪಡೆಯುವ ಅವಕಾಶವೇ ಇರುವುದಿಲ್ಲ ಎಂದು ತಿಳಿದುಬಂದಿದೆ.
ಡೇಟಾ ಸುರಕ್ಷತೆ ಹಾಗೂ ಕಾರ್ಡ್ ನ ದುರುಪಯೋಗ ತಡೆಯಲು ಹೊಸ ಪ್ರಯೋಗಕ್ಕೆ ಯುಐಡಿಎಐ ಮುಂದಾಗಿದೆ. ಆಧಾರ್ ಪರಿಶೀಲನೆ ಮಾಡುವಾಗ ವ್ಯಕ್ತಿಯ ಅನುಮತಿ ಅವಶ್ಯ. ಒಟಿಪಿ, ಬೆರಳಚ್ಚು (ಫಿಂಗರ್ಪ್ರಿಂಟ್) ಅಥವಾ ಕಣ್ಣಿನ ಸ್ಕ್ಯಾನ್ (ಐರಿಸ್) ಮೂಲಕ ಒಪ್ಪಿಗೆ ಪಡೆದ ನಂತರವೇ ವೇರಿಫಿಕೇಶನ್ ಮಾಡಬೇಕು. ಈ ನಿಯಮ ಉಲ್ಲಂಘಿಸಿದರೆ 1 ಕೋಟಿ ರೂ. ವರೆಗೆ ದಂಡ ವಿಧಿಸಬಹುದು ಎಂದು ಯುಐಡಿಎಐ ತಿಳಿಸಿದೆ.
ಇದನ್ನೂ ಓದಿ: ‘ಕಾಶ್ಮೀರ್ ಟೈಮ್ಸ್’ ಕಚೇರಿ ಮೇಲೆ ಪೊಲೀಸ್ ದಾಳಿ | AK47 ರೈಫಲ್ಸ್, ಗ್ರೆನೇಡ್ ಲಿವರ್‌ಗಳು ಪತ್ತೆ!



















