ಮಧುರೈ : ಸನಾತನ ಧರ್ಮಕ್ಕೆ ಸಂಬಂಧಿಸಿ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು 2023ರಲ್ಲಿ ನೀಡಿದ್ದ ವಿವಾದಿತ ಹೇಳಿಕೆಯು ‘ದ್ವೇಷ ಭಾಷಣ’ (Hate Speech) ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಬುಧವಾರ ಪುನರುಚ್ಚರಿಸಿದೆ. ಉದಯನಿಧಿ ಅವರ ಮಾತುಗಳನ್ನು ಟೀಕಿಸಿದ್ದ ಬಿಜೆಪಿ ನಾಯಕ ಅಮಿತ್ ಮಾಳವೀಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯವು ಈ ಕಠಿಣ ಅವಲೋಕನ ಮಾಡಿದೆ.
‘ಓಳಿಪ್ಪು’ ಅಂದರೆ ನರಮೇಧದ ಕರೆ: ಹೈಕೋರ್ಟ್ ಆಕ್ರೋಶ
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಶ್ರೀಮತಿ ಅವರು, ಉದಯನಿಧಿ ಸ್ಟಾಲಿನ್ ಬಳಸಿದ ‘ಸನಾತನ ಓಳಿಪ್ಪು’ (ಸನಾತನ ನಿರ್ಮೂಲನೆ) ಎಂಬ ಪದದ ಅರ್ಥವನ್ನು ಸವಿಸ್ತಾರವಾಗಿ ವಿಶ್ಲೇಷಿಸಿದರು. “ನಿರ್ಮೂಲನೆ ಅಥವಾ ರದ್ದುಗೊಳಿಸುವುದು ಎಂದರೆ ಅಸ್ತಿತ್ವದಲ್ಲಿರುವ ಒಂದು ವಸ್ತುವನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡುವುದು ಎಂದರ್ಥ. ಇದನ್ನು ಒಂದು ಧರ್ಮಕ್ಕೆ ಅನ್ವಯಿಸಿದರೆ, ಆ ಧರ್ಮವನ್ನು ಪಾಲಿಸುವ ಜನರು ಇರಬಾರದು ಎಂದೇ ಅರ್ಥವಾಗುತ್ತದೆ. ಇದು ನರಮೇಧ ಅಥವಾ ಸಾಂಸ್ಕೃತಿಕ ಹತ್ಯೆಗೆ (Culturicide) ಸಮನಾಗುತ್ತದೆ,” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಸನಾತನ ಧರ್ಮವನ್ನು ಡೆಂಘೀ, ಮಲೇರಿಯಾ ಮತ್ತು ಕೊರೊನಾದಂತಹ ರೋಗಗಳಿಗೆ ಹೋಲಿಸಿರುವುದು ಹಿಂದೂ ಧರ್ಮದ ಮೇಲಿನ ನೇರ ದಾಳಿ ಎಂದು ನ್ಯಾಯಾಲಯ ಕಿಡಿಕಾರಿದೆ.
ದ್ವೇಷ ಭಾಷಣ ಮಾಡಿದವರು ಮುಕ್ತ, ಟೀಕಿಸಿದವರಿಗೆ ಶಿಕ್ಷೆಯೇ?
ಪ್ರಸ್ತುತ ರಾಜಕೀಯ ಮತ್ತು ಕಾನೂನು ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, “ದ್ವೇಷ ಭಾಷಣವನ್ನು ಪ್ರಾರಂಭಿಸಿದವರು ಯಾವುದೇ ಶಿಕ್ಷೆಯಿಲ್ಲದೆ ಮುಕ್ತವಾಗಿ ಓಡಾಡುತ್ತಿದ್ದಾರೆ. ಆದರೆ ಅಂತಹ ಭಾಷಣಗಳಿಗೆ ಪ್ರತಿಕ್ರಿಯಿಸಿದವರು ಕಾನೂನಿನ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ,” ಎಂದು ಕಳವಳ ವ್ಯಕ್ತಪಡಿಸಿದೆ. ತಮಿಳುನಾಡಿನಲ್ಲಿ ಸಚಿವರ ವಿರುದ್ಧ ಈವರೆಗೆ ಯಾವುದೇ ದ್ವೇಷ ಭಾಷಣದ ಪ್ರಕರಣ ದಾಖಲಾಗಿಲ್ಲ, ಆದರೆ ಅವರ ಹೇಳಿಕೆಯನ್ನು ಪ್ರಶ್ನಿಸಿದವರ ಮೇಲೆ ಕೇಸ್ ಹಾಕಿರುವುದು ಕಾನೂನಿನ ದುರುಪಯೋಗ ಎಂದು ನ್ಯಾಯಾಲಯ ಹೇಳಿದೆ.
ದ್ರಾವಿಡ ಪಕ್ಷಗಳ 100 ವರ್ಷಗಳ ಸಿದ್ಧಾಂತಕ್ಕೆ ಟಾಂಗ್
ಕಳೆದ 100 ವರ್ಷಗಳಿಂದ ದ್ರಾವಿಡ ಕಳಗಂ ಮತ್ತು ನಂತರ ಡಿಎಂಕೆ ಪಕ್ಷವು ಹಿಂದೂ ಧರ್ಮದ ವಿರುದ್ಧ ಸತತವಾಗಿ ದಾಳಿ ನಡೆಸುತ್ತಾ ಬಂದಿದೆ ಎಂಬ ಇತಿಹಾಸವನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಉದಯನಿಧಿ ಸ್ಟಾಲಿನ್ ಅವರ ಪಕ್ಷದ ಸಿದ್ಧಾಂತವೇ ಹಿಂದೂ ಧರ್ಮದ ವಿರೋಧಿಯಾಗಿರುವುದರಿಂದ, ಅವರ ಹೇಳಿಕೆಗಳನ್ನು ಕೇವಲ ವೈಯಕ್ತಿಕ ಎಂದು ನೋಡಲಾಗದು ಎಂದು ಪೀಠ ತಿಳಿಸಿದೆ. ಗಾಂಧೀಜಿಯವರು ಕೂಡ ತಾವು ‘ಸನಾತನಿ ಹಿಂದೂ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು ಎಂಬ ಉದಾಹರಣೆಯನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ನೆನಪಿಸಿದೆ.
ಚುನಾವಣಾ ಹೊತ್ತಲ್ಲಿ ಹೊಸ ಸಂಕಷ್ಟ
ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಮೂರನಾಲ್ಕು ತಿಂಗಳು ಬಾಕಿ ಇರುವಾಗ ಹೈಕೋರ್ಟ್ ನೀಡಿರುವ ಈ ತೀರ್ಪು ಉದಯನಿಧಿ ಸ್ಟಾಲಿನ್ ಮತ್ತು ಡಿಎಂಕೆ ಸರ್ಕಾರಕ್ಕೆ ರಾಜಕೀಯವಾಗಿ ಇಕ್ಕಟ್ಟು ತಂದಿದೆ. ಸನಾತನ ಧರ್ಮವನ್ನು ನಾಶಪಡಿಸುವುದು ಎಂದರೆ ಶೇ.80ರಷ್ಟಿರುವ ಹಿಂದೂಗಳನ್ನು ಗುರಿಯಾಗಿಸಿದಂತೆ ಎಂಬ ಕೋರ್ಟ್ ಹೇಳಿಕೆಯು ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಂತಾಗಿದೆ.
ಇದನ್ನೂ ಓದಿ : ಇರಾನ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಅಜ್ಞಾತ ಇಂಜೆಕ್ಷನ್ ಪ್ರಯೋಗ | ಕೊರೆಯುವ ಚಳಿಯಲ್ಲಿ ನಗ್ನಗೊಳಿಸಿ ಚಿತ್ರಹಿಂಸೆ!



















