ಅಹಮದಾಬಾದ್ : ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಥರಾದ್ ತಾಲ್ಲೂಕಿನಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಅಂತರ್ಜಾತಿ ವಿವಾಹವೊಂದು ಈಗ ಭಾರೀ ಹಿಂಸಾಚಾರ, ಉದ್ನಿಗ್ನತೆಗೆ ಕಾರಣವಾಗಿದೆ. ಚೌಧರಿ ಮತ್ತು ರಬಾರಿ ಸಮುದಾಯಗಳ ನಡುವಿನ ಈ ಸಂಘರ್ಷವು ಬುಧವಾರ ವಿಕೋಪಕ್ಕೆ ಹೋಗಿದ್ದು, ಸಾವಿರಾರು ಜನರ ಗುಂಪು ಹಳ್ಳಿಯೊಂದಕ್ಕೆ ಮುತ್ತಿಗೆ ಹಾಕಿ ವಾಹನಗಳನ್ನು ಧ್ವಂಸಗೊಳಿಸಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ಬುಧವಾರ ಥರಾದ್‌ನಲ್ಲಿ ಅಂಜನಾ ಚೌಧರಿ ಸಮುದಾಯದ ಮುಖಂಡರು ಬೃಹತ್ ಸಭೆಯನ್ನು ಆಯೋಜಿಸಿದ್ದರು. ಸಭೆಯ ನಂತರ, ಆಕ್ರೋಶಗೊಂಡ ಸಾವಿರಾರು ಜನರ ಗುಂಪು ರಬಾರಿ ಸಮುದಾಯದವರು ಹೆಚ್ಚಿರುವ ‘ಉನ್’ ಗ್ರಾಮದತ್ತ ಮೆರವಣಿಗೆ ನಡೆಸಿತು. ಎರಡು ವರ್ಷಗಳ ಹಿಂದೆ ತಮ್ಮ ಸಮುದಾಯದ ಯುವತಿಯನ್ನು ವಿವಾಹವಾಗಿದ್ದ ರಬಾರಿ ಸಮುದಾಯದ ಯುವಕನ ಮನೆಯಿಂದ ಆಕೆಯನ್ನು ಮರಳಿ ಕರೆತರಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿತ್ತು. ಈ ವೇಳೆ ಉದ್ರಿಕ್ತ ಗುಂಪು ಗ್ರಾಮದಲ್ಲಿದ್ದ ವಾಹನಗಳನ್ನು ಜಖಂಗೊಳಿಸಿ, ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದರು, ಇದರಿಂದಾಗಿ ಹೆದ್ದಾರಿಯಲ್ಲಿ ಸುಮಾರು ಮೂರು ಕಿಲೋಮೀಟರ್‌ಗಳಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು.
ವಿವಾದಕ್ಕೆ ಕಿಚ್ಚು ಹಚ್ಚಿದ ಗಾಯಕಿ ಕಿಂಜಾಲ್ ರಬಾರಿ ಪೋಸ್ಟ್
ಎರಡು ವರ್ಷಗಳ ಹಿಂದೆ ಸುಗಮವಾಗಿ ಮುಗಿದಿದ್ದ ಮದುವೆಯ ವಿಚಾರ ಈಗ ಮತ್ತೆ ಮುನ್ನೆಲೆಗೆ ಬರಲು ಪ್ರಸಿದ್ಧ ಗುಜರಾತಿ ಗಾಯಕಿ ಕಿಂಜಾಲ್ ರಬಾರಿ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಕಾರಣ ಎನ್ನಲಾಗಿದೆ. ಕಿಂಜಾಲ್ ಅವರು ಚೌಧರಿ ಸಮುದಾಯದ ಅಶೋಕ್ ಎಂಬವರನ್ನು ಪ್ರೀತಿಸಿ ಮದುವೆಯಾಗಿರುವುದಾಗಿ ಇತ್ತೀಚೆಗೆ ಘೋಷಿಸಿದ್ದರು. ಇದು ಉಭಯ ಸಮುದಾಯಗಳ ನಡುವೆ ಚರ್ಚೆಗೆ ಗ್ರಾಸವಾಯಿತು. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಿಂಜಾಲ್ ತಮ್ಮ ಪೋಸ್ಟ್ ಡಿಲೀಟ್ ಮಾಡಿ, ಮದುವೆ ರದ್ದುಗೊಳಿಸಿರುವುದಾಗಿ ಮತ್ತು ತಮ್ಮದೇ ಸಮುದಾಯದ ವ್ಯಕ್ತಿಯನ್ನು ಮದುವೆಯಾಗುವುದಾಗಿ ಘೋಷಿಸಿದರು. ಈ ಘಟನೆಯು ಎರಡು ವರ್ಷಗಳ ಹಿಂದೆ ರಬಾರಿ ಸಮುದಾಯದ ಮಹದೇವ್ ಅವರನ್ನು ಮದುವೆಯಾಗಿದ್ದ ಕಂಕು ಚೌಧರಿ ಪ್ರಕರಣವನ್ನು ಮತ್ತೆ ಕೆದಕುವಂತೆ ಮಾಡಿದೆ.
‘ನನ್ನ ಕುಟುಂಬವನ್ನು ಒಡೆಯಬೇಡಿ’: ವಿವಾಹಿತ ಯುವತಿಯ ಕಣ್ಣೀರಿನ ಮನವಿ
ಸಮುದಾಯದ ಮುಖಂಡರು ತನ್ನನ್ನು ಮರಳಿ ಮನೆಗೆ ಕರೆತರಲು ಒತ್ತಡ ಹೇರುತ್ತಿರುವುದನ್ನು ಕಂಡು ಕಂಕು ಚೌಧರಿ ವಿಡಿಯೋ ಮೂಲಕ ಭಾವನಾತ್ಮಕ ಮನವಿ ಮಾಡಿದ್ದಾರೆ. “ನಾನು 2024ರ ಮಾರ್ಚ್ 31ರಂದು ನನ್ನ ಸ್ವಂತ ಇಚ್ಛೆಯಂತೆ ಮಹದೇವ್ ರಬಾರಿ ಅವರನ್ನು ಮದುವೆಯಾಗಿದ್ದೇನೆ. ನಮಗೀಗ ಒಂದು ವರ್ಷದ ಮಗನಿದ್ದಾನೆ. ನಾವು ಸುಖವಾಗಿದ್ದೇವೆ. ದಯವಿಟ್ಟು ನನ್ನನ್ನು ನನ್ನ ಪತಿ ಮತ್ತು ಮಗುವಿನಿಂದ ಬೇರ್ಪಡಿಸಬೇಡಿ. ನಿಮ್ಮ ನಿರ್ಧಾರಗಳು ನನ್ನ ಸಂಸಾರವನ್ನು ಬೀದಿಗೆ ತರದಿರಲಿ” ಎಂದು ಅವರು ಕೈಮುಗಿದು ಕೇಳಿಕೊಂಡಿದ್ದಾರೆ.
ಐದು ದಿನಗಳ ಗಡುವು ನೀಡಿದ ಸಮುದಾಯದ ಮುಖಂಡರು
ಚೌಧರಿ ಸಮುದಾಯದ ಅಧ್ಯಕ್ಷ ರಜನೀಶ್ ಚೌಧರಿ ಅವರು ಈ ಪ್ರಕರಣವನ್ನು ‘ಸಮುದಾಯದ ಗೌರವದ ಪ್ರಶ್ನೆ’ ಎಂದು ಬಣ್ಣಿಸಿದ್ದಾರೆ. ರಬಾರಿ ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿ, ಮುಂದಿನ ಐದು ದಿನಗಳಲ್ಲಿ ಯುವತಿಯನ್ನು ಮರಳಿ ಕರೆತರುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಒಂದು ವೇಳೆ ನಿಗದಿತ ಸಮಯದೊಳಗೆ ಯುವತಿ ಮರಳದಿದ್ದರೆ ಮುಂದಿನ ಹೋರಾಟದ ಹಾದಿಯನ್ನು ನಿರ್ಧರಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಸದ್ಯ ಉಭಯ ಗ್ರಾಮಗಳಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಇದನ್ನೂ ಓದಿ : ಡಿವೈಡರ್‌ಗೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ.. ಓರ್ವ ಸ್ಥಳದಲ್ಲೇ ಸಾವು!



















