ತುಮಕೂರು : ರಸ್ತೆ ಬದಿ ನಿಂತಿದ್ದ ಲಾರಿಗೆ ಕ್ರೂಜರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಅಯ್ಯಪ್ಪ ಸ್ವಾಮಿ ಭಕ್ತರು ಮೃತಪಟ್ಟ ಘಟನೆ ತುಮಕೂರು ತಾಲೂಕಿನ ಬೆಳ್ಳಾವಿ ಕ್ರಾಸ್ ಬಳಿ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಇಂದು ನಸುಕಿನ ಜಾವ ನಡೆದಿದೆ.
ಮೃತರನ್ನು ಸಾಕ್ಷಿ (7), ಮಾರುತಪ್ಪ (45), ವೆಂಕಟೇಶ (30), ಗವಿಸಿದ್ದಪ್ಪ (28) ಎಂದು ಗುರುತಿಸಲಾಗಿದ್ದು, ಎಲ್ಲರೂ ಕೊಪ್ಪಳ ಜಿಲ್ಲೆಯ ಕುಕ್ಕನೂರು ಪಟ್ಟಣದವರಾಗಿದ್ದಾರೆ.
ಗಾಯಾಳುಗಳ ಮಾಹಿತಿ: ಎಲ್ಲ ಗಾಯಾಳುಗಳು ಕೊಪ್ಪಳ ಜಿಲ್ಲೆಯವರಾಗಿದ್ದಾರೆ. ಕುಕ್ಕನೂರು ಮೂಲದ ಪ್ರವೀಣ್ ಕುಮಾರ್, ರಾಜಪ್ಪ, ಹುಲಿಗೆಪ್ಪ, ರಾಕೇಶ್, ತಿರುಪತಿ ಮತ್ತು ಗದ್ದಿಗೆರೆ ತಾಂಡಾದ ಶ್ರೀನಿವಾಸ ಸೇರಿ 7 ಜನರು ಗಾಯಗೊಂಡಿದ್ದಾರೆ. ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಯ್ಯಪ್ಪ ದರ್ಶನಕ್ಕೆ ತೆರಳಿದ್ದ ಭಕ್ತರು: ಕುಕನೂರು ಗ್ರಾಮದಿಂದ ಕ್ರೂಜರ್ ವಾಹನದಲ್ಲಿ ಚಾಲಕ ಸೇರಿದಂತೆ 10 ಜನ ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಗೆ ತೆರಳಿದ್ದರು. ಅಲ್ಲಿ ದರ್ಶನ ಮುಗಿಸಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಚಾಲಕ ನಿದ್ದೆ ಮಂಪರಿನಲ್ಲಿ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗುತ್ತಿದೆ.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ: ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು 7 ಜನ ಗಾಯಗೊಂಡಿದ್ದಾರೆ. ಬೆಳಿಗ್ಗೆ 6ರ ಸುಮಾರಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಇನ್ನು ನಾಲ್ವರನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಇನ್ನಿಬ್ಬರ ಆರೋಗ್ಯದಲ್ಲಿ ಚೇತರಿಸಿಕೊಂಡ ಬಳಿಕ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡುತ್ತೇವೆ. ಎಲ್ಲ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತುಮಕೂರು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಸ್ಗರ್ ಬೇಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತೆ ವಿವಸ್ತ್ರಗೊಳಿಸಿದ ಕೇಸ್ | ಕೇಶ್ವಾಪುರ ಠಾಣೆ ಇನ್ಸ್‌ಪೆಕ್ಟರ್ ವರ್ಗಾವಣೆ



















