ವಾಷಿಂಗ್ಟನ್: ದೇಶಿ ಉದ್ಯಮಿಗಳು ಮತ್ತು ಸ್ವದೇಶಿಯರಿಗೆ ಹೆಚ್ಚಿನ ಉದ್ಯೋಗ ನೀಡುವ ಉಮೇದಿಗೆ ಬಿದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ತೆರಿಗೆಯ ಗದಾ ಪ್ರಹಾರವನ್ನೇ ನಡೆಸಿದ್ದಾರೆ.
ವಿಶ್ವದ ವಿವಿಧ ದೇಶಗಳ ಮೇಲೆ ಪ್ರತಿ ಸುಂಕ ಹೇರೋ ಟ್ರಂಪ್ ನಡೆ ಇದೀಗ ಭಾರತದ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಭಾರತದ ಉತ್ಪನ್ನಗಳ ಮೇಲೆ ಟ್ರಂಪ್ ಇದೀಗ ಬರೋಬ್ಬರಿ ಶೇಕಡಾ 26ರಷ್ಟು ತೆರಿಗೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ನಿನ್ನೆ ತಡರಾತ್ರಿ ಈ ಬಗ್ಗೆ ಮಾತನಾಡಿರೋ ಅಮೆರಿಕಾ ಅಧ್ಯಕ್ಷ ಟ್ರಂಪ್, ಭಾರತದಿಂದ ಆಮದಾಗೋ ಉತ್ಪನ್ನಗಳ ಮೇಲೆ ಶೇಕಡ 26ರಷ್ಟು ತೆರಿಗೆ ವಿಧಿಸೋ ತೀರ್ಮಾನ ಮಾಡಿದ್ದಾರೆ. ಇತ್ತೀಚೆಗಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕಾ ಪ್ರವಾಸದ ವೇಳೆ ಪ್ರತಿ ತೆರಿಗೆ ವಿಧಿಸೋ ಬಗ್ಗೆ ಉಭಯ ನಾಯಕರು ಚರ್ಚಿಸಿದ್ರು. ಆದ್ರೆ ಇದೀಗ ಟ್ರಂಪ್ ರ ಈ ನಿರ್ಧಾರ ಭಾರತದ ಉದ್ಯಮಿಗಳಿಗೆ ಬಿಗ್ ಶಾಕ್ ನೀಡಿದೆ.
ಅಷ್ಟೇ ಅಲ್ಲಾ ಈ ಮೂಲಕ ಹಿಂದೂಸ್ಥಾನದ ಮೇಲೆ ಟ್ರಂಪ್ ತೆರಿಗೆ ದಾಳಿಯನ್ನೇ ನಡೆಸಿದ್ದಾರೆ ಅಂತಲೇ ವಿಶ್ಲೇಷಿಸಲಾಗುತ್ತಿದೆ. ದಶಕಗಳಿಂದಲೂ ವಿದೇಶಗಳು ಅಮೆರಿಕವನ್ನು ಬಳಿಸಿಕೊಂಡು ಅಪಾರ ಸಂಪತ್ತನ್ನು ಗಳಿಸಿವೆ. ಇದೀಗ ನಮ್ಮ ಸರದಿ ಎಂದಿರೋ ಟ್ರಂಪ್, ನಮ್ಮ ಮೇಲೆ ಯಾವ ದೇಶಗಳು ಎಷ್ಟು ತೆರಿಗೆ ವಿಧಿಸುತ್ತವೋ ನಾವೂ ಅದನ್ನೇ ಅವರ ಮೇಲೆ ಹೇರುತ್ತೇವೆ ಎಂದಿದ್ದಾರೆ. ಅಷ್ಟೇ ಅಲ್ಲಾ ಮುಂದಿನ ದಿನಗಳು ಅಮೆರಿಕದ ಪಾಲಿಗೆ ನಿಜಕ್ಕೂ ಸುವರ್ಣಯುಗವಾಗಲಿದೆ ಅಂತಲೂ ಟ್ರಂಪ್ ಬಣ್ಣಿಸಿದ್ದಾರೆ. ಜಪಾನ್, ಕೋರಿಯಾ, ಕೆನಡಾ ದೇಶಗಳು ಅಮೆರಿಕ ಉತ್ಪನ್ನಗಳ ಮೇಲೆ ವಿಧಿಸುತ್ತಿರೋ ಭಾರಿ ತೆರಿಗೆಯನ್ನು ಟ್ರಂಪ್ ಇದೇ ವೇಳೆ ಖಂಡಿಸಿದ್ದಾರೆ. ಟ್ರಂಪ್ ರ ಈ ಟ್ಯಾಕ್ಸ್ ಸರ್ಜಕಲ್ ಸ್ಟ್ರೈಕ್ ನಲ್ಲಿ ವಿಯಟ್ನಾಂ ಬರೋಬ್ಬರಿ ಶೇಕಡ 46ರಷ್ಟು ತೆರಿಗೆ ಹೇರಿಸಿಕೊಂಡಿದೆ. ಉಳಿದಂತೆ, ಚೀನಾ ಉತ್ಪನ್ನಗಳ ಮೇಲೆ 34%, ಥಾಯ್ಲೆಂಡ್ ನಿಂದ ಆಮದಾಗೋ ವಸ್ತುಗಳ ಮೇಲೆ ಶೇಕಡ 36ರಷ್ಟು ಸುಂಕ ವಿಧಿಸಲಾಗ್ತಿದೆ.