ಕೌಲಲಾಂಪುರ : ಆರಂಭಿಕ ಆಟಗಾರ್ತಿ ತ್ರಿಷಾ ಗೊಂಗಡಿ ಐತಿಹಾಸಿಕ ಶತಕದ ಸಾಧನೆ ನೆರವಿನಿಂದ ಮಿಂಚಿದ ಭಾರತ ತಂಡ ಐಸಿಸಿ ಅಂಡರ್-19 ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸ್ಕಾಟ್ಲೆಂಡ್ ವಿರುದ್ಧ ಸೂಪರ್ ಸಿಕ್ಸ್ ಪಂದ್ಯದಲ್ಲಿ ಭರ್ಜರಿ 150 ರನ್ ಅಂತರದ ಗೆಲುವು ಸಾಧಿಸಿದೆ. ತ್ರಿಷಾ ಚೊಚ್ಚಲ ಶತಕ ಬಾರಿಸುವ ಮೂಲಕ ಮಹಿಳಾ ಅಂಡರ್-19 ವಿಶ್ವಕಪ್ ಇತಿಹಾಸದಲ್ಲೇ ಶತಕ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದರು.

ಒಂದನೇ ಗುಂಪಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಆರಂಭಿಕರಾದ ತ್ರಿಷಾ ಗೊಂಗಡಿ ಮತ್ತು ಜಿ. ಕಮಲಿನಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ ಒಂದು ವಿಕೆಟ್ ಕಳೆದುಕೊಂಡು 208 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಸ್ಕಾಟ್ಲೆಂಡ್ 58ರನ್‌ಗೆ ಸರ್ವಪತನ ಕಂಡಿತು. ಈ ಗೆಲುವಿನೊಂದಿಗೆ ಭಾರತ ತಂಡ ಎಲ್ಲ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ.
ತ್ರಿಷಾ ಶತಕ ದಾಖಲೆ
ಅಬ್ಬರದಿಂದ ಬ್ಯಾಟ್ ಬೀಸಿದ ತ್ರಿಷಾ ಹಾಗೂ ಕಮಲಿನಿ ಎದುರಾಳಿ ತಂಡದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಅವರಿಬ್ಬರು 13.3 ಓವರ್ ತನಕ ಬ್ಯಾಟಿಂಗ್ ನಡೆಸಿ ಮೊದಲ ವಿಕೆಟ್‌ಗೆ 147 ರನ್ ಕಲೆ ಹಾಕಿದರು. ತ್ರಿಷಾ 59 ಎಸೆತಗಳಲ್ಲಿ 13 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ ಅಜೇಯ 110 ರನ್ ಗಳಿಸಿದರೆ, ಕಮಲಿನಿ 42 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳ ನೆರವಿನಿಂದ 51 ರನ್ ಸಿಡಿಸಿದರು. ಕೊನೆಯಲ್ಲಿ ಸಾನಿಕಾ ಚಲ್ಕೆ 29 ರನ್ ಬಾರಿಸಿ ಅಜೇಯರಾಗಿ ಉಳಿದರು.
ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಮಿಂಚಿದ ತ್ರಿಷಾ 2 ಓವರ್ ಬೌಲಿಂಗ್ ಮಾಡಿ ಕೇವಲ 6 ರನ್ ವೆಚ್ಚದಲ್ಲಿ ಪ್ರಮುಖ ಮೂರು ವಿಕೆಟ್ ಕಿತ್ತರು. ಇವರ ಈ ಆಲ್‌ರೌಂಡರ್ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಆಯುಷಿ ಶುಕ್ಲಾ 3 ಓವರ್ ಬೌಲಿಂಗ್ ನಡೆಸಿ ಕೇವಲ 8 ರನ್ ವೆಚ್ಚದಲ್ಲಿ 4 ವಿಕೆಟ್ ಉಡಾಯಿಸಿದರೆ, ವೈಷ್ಣವಿ ಶರ್ಮಾ 5 ಕ್ಕೆ 3 ವಿಕೆಟ್ ಪಡೆದರು. ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಂಪೂರ್ಣವಾಗಿ ವಿಫಲವಾದ ಸ್ಕಾಟ್ಲೆಂಡ್ ಪರ ಆರಂಭಿಕರಿಬ್ಬರು ಗಳಿಸಿದ ತಲಾ 12 ರನ್ ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತವಾಯಿತು. ಮೂರು ಮಂದಿ ಶೂನ್ಯ ಸುತ್ತಿದರು.