ವಾಷಿಂಗ್ಟನ್: ಭಾರತದಲ್ಲಿ ಈಗಾಗಲೇ ನಿಷೇಧಕ್ಕೊಳಗಾಗಿರುವ ಶಾರ್ಟ್ ವಿಡಿಯೋ ಪ್ಲಾಟ್‌ಫಾರಂ ಟಿಕ್ ಟಾಕ್‌ಗೆ ಈಗ ಅಮೆರಿಕದಲ್ಲೂ ನಿಷೇಧದ ಬಿಸಿ ತಟ್ಟಿದೆ. ಭಾನುವಾರವೇ ಅಮೆರಿಕದಲ್ಲಿ ಹೊಸ ಕಾನೂನು ಜಾರಿಯಾಗಿದ್ದು, ಅಲ್ಲಿನ ಕೋಟಿಗಟ್ಟಲೆ ಚಂದಾದಾರರ ಮೊಬೈಲ್‌ನಿಂದ ಟಿಕ್ ಟಾಕ್ ಆ್ಯಪ್ ಕಣ್ಮರೆಯಾಗಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ಗಳಿಂದಲೂ ಟಿಕ್ ಟಾಕ್ ಅನ್ನು ತೆಗೆದು ಹಾಕಲಾಗಿದೆ. ಇನ್ನೊಂದೆಡೆ, ಸೋಮವಾರ ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದು, ಅವರು ಟಿಕ್ ಟಾಕ್ ಗೆ ಮರುಜೀವ ನೀಡುವ ಸಾಧ್ಯತೆಯಿದೆ. ನನ್ನ ಪದಗ್ರಹಣದ ಬಳಿಕ ಆ್ಯಪ್ ಮಾರಾಟ ಮಾಡಲು ಟಿಕ್ ಟಾಕ್ ನ ಮಾತೃಸಂಸ್ಥೆಗೆ ನೀಡಲಾದ ಗುಡುವನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸುತ್ತೇನೆ ಎಂದು 2 ದಿನಗಳ ಹಿಂದಷ್ಟೇ ಟ್ರಂಪ್ ನುಡಿದಿದ್ದಾರೆ.
“ಅಧ್ಯಕ್ಷ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಟಿಕ್‌ಟಾಕ್ ಮರುಸ್ಥಾಪನೆ ವಿಚಾರದಲ್ಲಿ ನೆರವಾಗುವುದಾಗಿ ಭರವಸೆ ಕೊಟ್ಟಿರುವುದು ನಮ್ಮ ಅದೃಷ್ಟ” ಎಂದು ಟಿಕ್‌ಟಾಕ್ ಸಂಸ್ಥೆ ತಿಳಿಸಿದೆ. ಚೀನಾ ಮೂಲದ ಟಿಕ್‌ಟಾಕ್ ಅನ್ನು ಭಾರತ 2020ರ ಜೂನ್ 29ರಂದು ನಿಷೇಧಿಸಿತ್ತು. ಅದಕ್ಕೆ ಮೊದಲು ಭಾರತದಲ್ಲೂ ಆ ಕಂಪನಿ ಕೋಟ್ಯಂತರ ಬಳಕೆದಾರರನ್ನು ಹೊಂದಿತ್ತು. ಆಂತರಿಕ ಭದ್ರತೆಯ ಹಿನ್ನೆಲೆಯಲ್ಲಿ ಭಾರತವು ಅದಕ್ಕೆ ಗೇಟ್ ಪಾಸ್ ನೀಡಿತ್ತು.
ಅಮೆರಿಕದಲ್ಲಿ 17 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಟಿಕ್ ಟಾಕ್ ಈಗ ಕಾರ್ಯಾಚರಣೆ ನಿಲ್ಲಿಸಿದ್ದು, ಅಪ್ಲಿಕೇಷನ್ ಓಪನ್ ಆಗದಿರುವ ಸ್ಕ್ರೀನ್ ಶಾಟ್ ಅನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಟಿಕ್‌ಟಾಕ್ ನಿಷೇಧಿಸುವ ಕಾನೂನು ಜಾರಿಗೆ ತರಲಾಗಿದೆ ಎಂದು ಹೇಳುವ ಸಂದೇಶದ ಕಿರು- ವಿಡಿಯೋ ಕೂಡ ವೈರಲ್ ಆಗಿದೆ. ಎಲ್ಲ ಬಳಕೆದಾರರಿಗೂ ಅಪ್ಲಿಕೇಶನ್‌ನಲ್ಲಿರುವ ಡೇಟಾವನ್ನು ತೆಗೆದುಕೊಳ್ಳುವುದಕ್ಕೆ ಸದ್ಯಕ್ಕೆ ಅವಕಾಶ ನೀಡಲಾಗಿದೆ. ವೆಬ್‌ಸೈಟ್‌ಗೆ ಹೋಗುವ ಲಿಂಕ್ ನೀಡಲಾಗಿದ್ದು, ಅಲ್ಲಿಂದ ತಮ್ಮ ದತ್ತಾಂಶಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಟಿಕ್‌ಟಾಕ್ ಸಂಸ್ಥೆ ಹೇಳಿದೆ.
ಟಿಕ್‌ಟಾಕ್ ತನ್ನ ಸೇವೆ “ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ” ಎಂದು ಬಳಕೆದಾರರಿಗೆ ಸಂದೇಶದಲ್ಲಿ ತಿಳಿಸಿದೆ. ಅಮೆರಿಕದಲ್ಲಿ ತನ್ನ ಸೇವೆಯನ್ನು ಸಾಧ್ಯವಾದಷ್ಟು ಬೇಗ ಪುನಃಸ್ಥಾಪಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದೆ.
ಟಿಕ್ ಟಾಕ್ ನಿಷೇಧ ಏಕೆ?
ಚೀನಾ ಮೂಲದ ಬೈಟ್ ಡ್ಯಾನ್ಸ್ ಟಿಕ್‌ಟಾಕ್‌ನ ಮಾತೃ ಸಂಸ್ಥೆಯಾಗಿದ್ದು, ಅದನ್ನು ಅಮೆರಿಕ ಮೂಲದ ಅನುಮೋದಿತ ಕಂಪನಿಗೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಭದ್ರತೆ ಆಧಾರದ ಮೇಲೆ ಟಿಕ್ ಟಾಕ್ ನಿಷೇಧಿಸಲಾಗುತ್ತದೆ ಎಂಬ ಕಾನೂನನ್ನು ರಚಿಸಲಾಗಿದೆ. ಈ ಕಾನೂನು ಸಮರ್ಪಕವಾಗಿದೆ ಎಂದು ಹೇಳಿ ಅಲ್ಲಿನ ಸುಪ್ರೀಂ ಕೋರ್ಟ್ ಶನಿವಾರ ಕಾನೂನನ್ನು ಎತ್ತಿಹಿಡಿದಿತ್ತು. ಈ ತೀರ್ಪು ನೀಡಿ ಒಂದೇ ದಿನದಲ್ಲಿ ಟಿಕ್‌ಟಾಕ್ ಬ್ಯಾನ್ ಆಗಿದೆ.
ಟ್ರಂಪ್ ಭರವಸೆ
ಹೊಸ ಒಪ್ಪಂದ ಮಾಡಿಕೊಳ್ಳುವುದಕ್ಕೆ ಟಿಕ್ ಟಾಕ್‌ಗೆ ಇನ್ನೂ 90 ದಿನಗಳ ಕಾಲಾವಕಾಶ ನೀಡುತ್ತೇನೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕಳೆದ ವರ್ಷ ಯುಎಸ್ ಅಧ್ಯಕ್ಷ ಜೋ ಬೈಡನ್ ಸಹಿ ಹಾಕಿದ ಕಾನೂನಿನ ಅನ್ವಯ, ಚೀನಾ ಮೂಲದ ಕಂಪನಿ ಬೈಟ್‌ಡ್ಯಾನ್ಸ್ ಟಿಕ್‌ಟಾಕ್ ಅನ್ನು ಅಮೆರಿಕದಲ್ಲಿ ಅನುಮೋದಿತ ಖರೀದಿದಾರರಿಗೆ ಮಾರಾಟ ಮಾಡಲು 9 ತಿಂಗಳ ಕಾಲಾವಕಾಶ ನೀಡಲಾಗಿತ್ತು. ವಿಕ್ರಯ ಪ್ರಗತಿಯಲ್ಲಿದ್ದರೆ ಹಾಲಿ ಅಧ್ಯಕ್ಷರಿಗೆ ವಿಸ್ತರಣೆ ನೀಡಲು ಕಾನೂನು ಅವಕಾಶ ಕೊಟ್ಟಿತ್ತು.