ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಬಲಿಪಡೆದ ಪಾಕಿಸ್ತಾನ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಸಂಘಟನೆಯನ್ನು ಅಮೆರಿಕವು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಇದು ಭಾರತದ ಭದ್ರತಾ ಪಡೆಗಳ ನೈತಿಕ ಸ್ಥೈರ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ. ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಜಾಲಗಳನ್ನು ಬಯಲಿಗೆಳೆಯುವ ಭಾರತದ ಪ್ರಯತ್ನದಲ್ಲಿ ಇದು ಮಹತ್ವದ ಮೈಲಿಗಲ್ಲು ಎಂದೂ ಪರಿಗಣಿಸಲಾಗಿದೆ.
ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು 2019ರಲ್ಲಿ ರದ್ದುಗೊಳಿಸಿದ ನಂತರ ಹುಟ್ಟಿಕೊಂಡ ಸಂಘಟನೆಯೇ ಟಿಆರ್‌ಎಫ್. ಇದನ್ನು ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ದ ಅಂಗ ಸಂಸ್ಥೆ ಎಂದು ಹೇಳಲಾಗಿದೆ. ಕಾಶ್ಮೀರದಲ್ಲಿ ಸ್ಥಳೀಯ ಪ್ರತಿರೋಧದ ಭ್ರಮೆ ಮೂಡಿಸಲು ಮತ್ತು ಪಾಕಿಸ್ತಾನ ಮೂಲದ ತನ್ನ ನಾಯಕತ್ವವನ್ನು ಮರೆಮಾಚಲು ಇದನ್ನು ಸೃಷ್ಟಿಸಲಾಗಿತ್ತು ಎನ್ನಲಾಗಿದೆ. ಈಗ ಅಮೆರಿಕವು ಟಿಆರ್‌ಎಫ್ ಅನ್ನು ಎಲ್‌ಇಟಿ-ಸಂಬಂಧಿತ ಉಗ್ರ ಘಟಕ ಎಂದು ಅಧಿಕೃತವಾಗಿ ಗುರುತಿಸಿದ್ದು, ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಭಾರತದ ದೀರ್ಘಕಾಲದ ಹೋರಾಟ ಮತ್ತು ವಾದಕ್ಕೆ ಮನ್ನಣೆ ದೊರೆತಂತಾಗಿದೆ.
ಟಿಆರ್‌ಎಫ್ ಕಾರ್ಯಾಚರಣೆಗೆ ಅಡ್ಡಿ
“ಅಮೆರಿಕದ ಈ ಕ್ರಮವು, ಈ ಸಂಘಟನೆಗಳು ಗಡಿಯನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತವೆ ಮತ್ತು ತಪ್ಪು ನಿರೂಪಣೆಗಳ ಅಡಿಯಲ್ಲಿ ಭಾರತೀಯ ಯುವಕರನ್ನು ಹೇಗೆ ಉಗ್ರರನ್ನಾಗಿ ಬದಲಾಯಿಸುತ್ತವೆ ಎಂಬುದರ ಬಗ್ಗೆ ಹೆಚ್ಚುತ್ತಿರುವ ಅರಿವನ್ನು ತೋರಿಸುತ್ತದೆ” ಎಂದು ಗುಪ್ತಚರ ಮೂಲಗಳು ಹೇಳಿವೆ. ಈ ಘೋಷಣೆಯು ಟಿಆರ್‌ಎಫ್‌ನ ಕಾರ್ಯಾಚರಣೆಗೆ ಅಡ್ಡಿ ಉಂಟುಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಟಿಆರ್‌ಎಫ್ ಅನ್ನು ಉಗ್ರ ಸಂಘಟನೆ ಎಂದು ಘೋಷಿಸಿರುವ ಕಾರಣ ಇನ್ನು ಈ ಸಂಘಟನೆಗೆ ಹಣ ಸಂಗ್ರಹಣೆ, ಸ್ಥಳೀಯ ಕಾರ್ಯಕರ್ತರ ನೇಮಕ, ಕಾನೂನುಬದ್ಧತೆಯನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ.
ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವ ಪರಿಸರ ವ್ಯವಸ್ಥೆಯನ್ನು ನಾಶಪಡಿಸುವಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ. ಟಿಆರ್‌ಎಫ್ ಕಾರ್ಯಕರ್ತರ ಹಸ್ತಾಂತರ ಮತ್ತು ಗಡಿಯಾಚೆಗಿನ ಸುರಕ್ಷಿತ ನೆಲೆಗಳಿಂದ ದಾಳಿಗಳನ್ನು ಸಂಯೋಜಿಸುವವರ ವಿರುದ್ಧ ಕ್ರಮ ಸೇರಿದಂತೆ ಅಂತEರಾಷ್ಟ್ರೀಯ ಸಹಕಾರವನ್ನು ಕೋರಲು ಭಾರತೀಯ ಏಜೆನ್ಸಿಗಳಿಗೆ ಈಗ ಬಲವಾದ ಆಧಾರ ಸಿಕ್ಕಂತಾಗಿದೆ. ಕಾಶ್ಮೀರದ ಭಯೋತ್ಪಾದನಾ ಸಮಸ್ಯೆ ಬಾಹ್ಯವಾಗಿ ಪ್ರೇರಿತವಾಗಿದೆ ಮತ್ತು ಅಂತರರಾಷ್ಟ್ರೀಯ ಹೊಣೆಗಾರಿಕೆಯಿಲ್ಲದೆ ಅದನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬ ಭಾರತದ ದೀರ್ಘಕಾಲದ ನಿಲುವನ್ನು ಇದು ಬೆಂಬಲಿಸಿದಂತಾಗಿದೆ.
“ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಇನ್ನು ಮುಂದೆ ಸ್ಥಳೀಯ ದೃಷ್ಟಿಕೋನದಿಂದ ನೋಡಲಾಗುವುದಿಲ್ಲ, ಬದಲಾಗಿ ವ್ಯಾಪಕ, ಜಾಗತಿಕ ಬೆದರಿಕೆಯ ಭಾಗವಾಗಿ ನೋಡಲಾಗುತ್ತದೆ ಎಂಬುದರ ಸಂಕೇತವೂ ಇದಾಗಿದೆ” ಎಂದು ಗುಪ್ತಚರ ಮೂಲಗಳು ಹೇಳಿವೆ.



















