ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಈಗ ಸಾರಿಗೆ ಸಂಸ್ಥೆ ಸಿಬ್ಬಂದಿ ಬೀದಿಗೆ ಇಳಿಯಲು ಮುಂದಾಗಿದ್ದಾರೆ.
ಬರೋಬ್ಬರಿ 38 ತಿಂಗಳುಗಳಿಂದ ರಾಜ್ಯದ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರಿಗೆ ಅರಿಯರ್ಸ್ ಬಾಕಿ ಹಣ ನೀಡಿಲ್ಲ. ಅಲ್ಲದೇ, ಜನವರಿಯಿಂದ ಸಂಬಳ ಹೆಚ್ಚಳ ಮಾಡಿಲ್ಲ ಎಂದು ಸಿಬ್ಬಂದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿವೃತ್ತಿ ಹೊಂದಿದ ನೌಕರರಿಗೆ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಿಲ್ಲ. 1750 ಕೋಟಿ ರೂ. ಅರಿಯರ್ಸ್ ಹಣ ಬಿಡುಗಡೆಯಾಗಬೇಕಿದೆ. ಗ್ರಾಚ್ಯುಟಿ ಹಣ ಸುಮಾರು 399.29 ಕೋಟಿ ರೂ. ಬಿಡುಗಡೆಯಾಗಬೇಕಿದೆ. ಈ ಎಲ್ಲ ಬೇಡಿಕೆ ಈಡೇರಿಕೆಗಾಗಿ ನೌಕರಸ್ಥರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.
ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒತ್ತಡ ಹಾಕುವ ಕುರಿತು ಆರು ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಗಾಂಧಿನಗರದ ಸಿಐಟಿಯು ಮುಖ್ಯ ಕಚೇರಿಯಲ್ಲಿ ಸಭೆ ನಡೆಸಿತು. ಈ ಸಂದರ್ಭದಲ್ಲಿ ಸಾರಿಗೆ ಮುಖಂಡ ಅನಂತ್ ಸುಬ್ಬರಾವ್, ಹಿಂದಿನ ಸರ್ಕಾರ ಇದ್ದಾಗ ಹೋರಾಟ ಮಾಡಲಾಗಿತ್ತು. ಈಗ ನಮ್ಮ ಮುಷ್ಕರ ನ್ಯಾಯ ಸಿಗುವವರೆಗೂ ನಡೆಯಲಿದೆ. ನಾವು ಈಗ ಮುಷ್ಕರದ ದಿನಾಂಕ ಘೋಷಣೆ ಮಾಡುವುದಷ್ಟೇ ಬಾಕಿ. ಇಲ್ಲಿಯವರೆಗೆ ನಮಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ದರಾಗಿದ್ದಾರೆ. ಸದ್ಯದಲ್ಲೇ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಅಧಿವೇಶನಕ್ಕೂ ಮುನ್ನ ಸರ್ಕಾರಕ್ಕೆ ಮತ್ತೊಂದು ಚಿಂತೆ ಶುರುವಾದಂತಾಗಿದೆ.