ಬೆಂಗಳೂರು: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಹಲವು ರಸ್ತೆಗಳಿಗೆ ನಿರ್ಬಂಧ ಹೇರಲಾಗಿದ್ದು, ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಚಾಮರಾಜಪೇಟೆ ಹಾಗೂ ಮೈಸೂರು ರಸ್ತೆಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬನ್ನೇರುಘಟ್ಟ ರಸ್ತೆಯ ಗುರಪ್ಪನಪಾಳ್ಯ ಜಂಕ್ಷನ್ ನಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಸಾಗರ್ ಅಪೋಲೋ ಜಂಕ್ಷನ್ ನಿಂದ ಗುರಪ್ಪನಪಾಳ್ಯ ಜಂಕ್ಷನ್ ವರೆಗೆ, ಸಾಯಿರಾಂ ಜಂಕ್ಷನ್ ನಿಂದ ಗುರಪ್ಪನಪಾಳ್ಯ ಜಂಕ್ಷನ್ ವರೆಗೆ, ಗುರಪ್ಪನಪಾಳ್ಯ ಜಂಕ್ಷನ್ ನಿಂದ ರೆಡ್ಡಿ ಆಸ್ಪತ್ರೆ ಜಂಕ್ಷನ್ ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಸೂಚಿಸಿದ್ದಾರೆ. ಡೈರಿ ಸರ್ಕಲ್ ಕಡೆಯಿಂದ ಬರುವ ವಾಹನಗಳು ತಿಲಕ್ ನಗರ, ಸ್ವಾಗತ್ ಜಂಕ್ಷನ್, ಜಯನಗರ ಈಸ್ಟ್ ಎಂಡ್ ಮೂಲಕ ಜಯದೇವ ಆಸ್ಪತ್ರೆಯಿಂದ ಬನ್ನೇರುಘಟ್ಟ ರಸ್ತೆ ಸಂಪರ್ಕ ಹೊಂದಲು ಸೂಚಿಸಲಾಗಿದೆ.
ಬನ್ನೇರುಘಟ್ಟ ರಸ್ತೆಯಿಂದ ಬರುವ ವಾಹನಗಳು ಜೇಡಿಮರ ಜಂಕ್ಷನ್, ಜಯದೇವ, ಈಸ್ಟ್ ಎಂಡ್, ಸ್ವಾಗತ್ ಜಂಕ್ಷನ್ ಮೂಲಕ ಡೈರಿ ಸರ್ಕಲ್ ತಲುಪುವುದು. ನಾಗವಾರ ಪಾಟರಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ನಾಗವಾರ ಜಂಕ್ಷನ್ ನಿಂದ ಪಾಟರಿ ರಸ್ತೆ ಸರ್ಕಲ್ ವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವವರು ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ನಾಗವಾರ ಕಡೆಯಿಂದ ಬರುವ ವಾಹನಗಳು ಹೆಣ್ಣೂರು ಜಂಕ್ಷನ್, ಕಾಚರಕನಹಳ್ಳಿ, ಲಿಂಗರಾಜಪುರಂ, ಪುಲಕೇಶಿನಗರ ಪೊಲೀಸ್ ಠಾಣೆ, ಹೇನ್ಸ್ ರಸ್ತೆ ಮೂಲಕ ಸಂಚಾರ ಮಾರ್ಗವಾಗಿ ಹಾಗೂ ಶಿವಾಜಿನಗರ ಕಡೆಯಿಂದ ಸಂಚರಿಸುವ ವಾಹನಗಳು ಸ್ಪೆನ್ಸರ್ ರಸ್ತೆ, ಕೋಲ್ಸ್ ರಸ್ತೆ, ವೀಲರ್ಸ್ ರಸ್ತೆ ಮೂಲಕ ನಾಗವಾರ, ಬಾಣಸವಾಡಿ ಕಡೆಗೆ ಸಂಚಾರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕುರಿತು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.