ಬಿಹಾರ : ಬಿಹಾರದಲ್ಲಿ ಗಂಭೀರ ಆರೋಗ್ಯ ಆತಂಕಕ್ಕೆ ಕಾರಣವಾಗಿರುವ ಹೊಸ ಅಧ್ಯಯನವೊಂದು ಹೊರಬಿದ್ದಿದೆ.. ಶಿಶುಗಳಿಗೆ ಜೀವನಾಡಿಯಾದ ತಾಯಂದಿರ ಎದೆಹಾಲು ವಿಷವಾಗಿದೆ. ಆರು ಜಿಲ್ಲೆಗಳ ಮಹಿಳೆಯರ ಎದೆಹಾಲಲ್ಲಿ ವಿಷಕಾರಿ ಯುರೇನಿಯಂ–238 ಇರುವುದು ಪತ್ತೆಯಾಗಿದೆ.
ತಾಯಂದಿರ ಎದೆ ಹಾಲು ಅಮೃತಕ್ಕೆ ಸಮ ಅಂತಾರೇ ಅದುವೇ ವಿಷವಾದರೇ?.. ಹೌದು ಬಿಹಾರದ 6 ಜಿಲ್ಲೆಗಳಲ್ಲಿ ಹಾಲುಣಿಸುವ ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ -238 ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಅಧ್ಯಯನ ದೇಶವನ್ನೇ ಬೆಚ್ಚಿಬೀಳಿಸಿದೆ. ಬಿಹಾರದ ಏಮ್ಸ್ ಆಸ್ಪತ್ರೆ ನಡೆಸಿದ ಅಧ್ಯಯನದ ವೇಳೆ ಪರೀಕ್ಷೆಗೆ ಒಳಪಡಿಸಿದ 40 ತಾಯಂದಿರ ಎದೆ ಹಾಲಲ್ಲಿ ಯುರೇನಿಯಂ ಪತ್ತೆಯಾಗಿದೆ. ಎದೆಹಾಲು ಉಣಿಸುವುದರ ಮೂಲಕ ಯುರೇನಿಯಂ ಶಿಶು ದೇಹವನ್ನು ಪ್ರವೇಶಿಸಿ ಕ್ಯಾನ್ಸರ್ ಹಾಗೂ ಇತರೆ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆ ಇದೆ ಅಂತ ತಿಳಿಸಿದೆ..
ಪಟನಾದ ಮಹಾವೀರ ಕ್ಯಾನ್ಸರ್ ಮಹಾವಿದ್ಯಾಲಯ ಮತ್ತು ದಿಲ್ಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಮಂಡಳಿಯೂ ಈ ಆರು ಜಿಲ್ಲೆಗಳಲ್ಲಿ 40 ತಾಯಂದಿರ ಎದೆಹಾಲು ಮಾದರಿ ಪರೀಕ್ಷೆಯನ್ನು ಏಮ್ಸ್ ಆಸ್ಪತ್ರೆಯಲ್ಲಿ ಮಾಡಿದೆ. ಆಗ ಯುರೇನಿಯಂ-238 ಕಣ ಇರುವುದು ಕಂಡು ಬಂದಿದೆ.ಅದರಲ್ಲಿ 5 ಪಿಪಿಬಿ ಯಷ್ಟು ಯುರೇನಿಯಂ ಪತ್ತೆಯಾಗಿದೆ. ಈಗಾಗಲೇ ಶೇ.70 ಶಿಶುಗಳ ಆರೋಗ್ಯದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯಿದೆ ಎಂದು ವರದಿ ನೀಡಿದೆ. ಈ ವಿಚಾರ ಹೆಚ್ಚು ಕಳವಳಕ್ಕೆ ಕಾರಣವಾಗಿದೆ.
ಪಟನಾದ ಸಂಸ್ಥೆ ತಿಳಿಸಿರೋ ಪ್ರಕಾರ..ಯುರೇನಿಯಂ ನೈಸರ್ಗಿಕವಾಗಿ ಗ್ರಾನೈಟ್ ಮತ್ತು ಇತರ ಬಂಡೆಗಳಲ್ಲಿ ಕಂಡುಬರುವ ವಿಕಿರಣಶೀಲ ಅಂಶವಾಗಿದೆ. ಗಣಿಗಾರಿಕೆ, ಕಲ್ಲಿದ್ದಲು ಸುಡುವುದು, ರಸಗೊಬ್ಬರಗಳ ಬಳಕೆ ಮತ್ತು ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ಇದು ಅಂತರ್ಜಲವನ್ನು ಕಲುಷಿತಗೊಳಿಸುತ್ತದೆ.ಈ ನೀರನ್ನು ಕುಡಿಯುವುದು ಅಥವಾ ಬಳಸುವುದರಿಂದ ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಅಂಶಗಳು ಸೇರಿ ಶಿಶುಗಳ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತವೆ. ಮೊದಲು ಶಿಶುವಲ್ಲಿ ಕಿಡ್ನಿ ಮತ್ತು ನರರೋಗಗಳಿಗೆ ಸಮಸ್ಯೆ ಕಂಡುಬರುತ್ತದೆ. ಬಳಿಕ ಇತರೆ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯಿದೆ.
ಭಾರತದ 18 ರಾಜ್ಯಗಳ ಅಂದಾಜು 151 ಜಿಲ್ಲೆಗಳಲ್ಲಿ ಯುರೇನಿಯಂ ಇರುವುದು ಪತ್ತೆಯಾಗಿದೆ. ಬಿಹಾರದಲ್ಲಿ ಅತಿ ಹೆಚ್ಚಿನ ಬಾಧ್ಯತೆ ಗೋಚರಿಸಿದೆ. ಜಾಗತಿಕವಾಗಿ ಅಮೆರಿಕ, ಚೀನಾ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ಯುರೇನಿಯಂ ಮಟ್ಟ ಹೆಚ್ಚಿರುವುದು ಕಂಡುಬಂದಿದೆ. ಇದೀಗ ಬಿಹಾರದಲ್ಲಿ ಸಮಗ್ರ ತನಿಖೆ ಬೇಕೆ ಬೇಕು ಈ ಬಗ್ಗೆ ಸರ್ಕಾರ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಬಿಹಾರದಲ್ಲಿ ಪತ್ತೆಯಾದ ಈ ವರದಿ—ಶಿಶುಗಳ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ, ದೇಶದ ಪರಿಸರ..ಜಲಮೂಲಗಳ ಸುರಕ್ಷತೆ ಕುರಿತ ದೊಡ್ಡ ಪ್ರಶ್ನೆ ಎತ್ತಿದೆ. ಯೂರೇನಿಯಂ ನೇರವಾಗಿ ಎದೆಹಾಲಿಗೆ ತಲುಪಿರುವುದು, ಪರಿಸರ ಮಾಲಿನ್ಯ ಎಷ್ಟು ಆಳಕ್ಕೆ ಹೋಗಿದೆ ಎನ್ನುವುದರ ಸುಳಿವು.
ಇದನ್ನೂ ಓದಿ : ಕೋಲಾರ | ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬದುಕುಳಿದ 3 ವರ್ಷದ ಮಗು



















