ವಾಷಿಂಗ್ಟನ್: ಮಧ್ಯ ಅಮೆರಿಕಾದಾದ್ಯಂತ ಎದ್ದಿರುವ ಸುಂಟರಗಾಳಿ(tornadoes) ಹಾಗೂ ಭಾರೀ ಬಿರುಗಾಳಿಯು ಕನಿಷ್ಠ 27 ಜನರನ್ನು ಬಲಿಪಡೆದಿದೆ. ನೂರಾರು ಮಂದಿ ಗಾಯಗೊಂಡಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಕಾಏಕಿ ಬೀಸಲಾರಂಭಿಸಿದ ಸುಂಟರಗಾಳಿ(tornadoes)ಯಿಂದಾಗಿ ಮನೆಗಳ ಚಾವಣಿಗಳು ಹಾರಿಹೋಗಿವೆ. ಗಾಳಿಯ ರಭಸಕ್ಕೆ ಬೃಹತ್ ಟ್ರಕ್ ಗಳೂ ಸೇರಿದಂತೆ ಎಲ್ಲ ವಾಹನಗಳೂ ಪಲ್ಟಿಯಾಗಿವೆ. ಕಾನ್ಸಾಸ್‌ನಲ್ಲಿ 50 ಕ್ಕೂ ಹೆಚ್ಚು ವಾಹನಗಳು ಸರಣಿ ಅಪಘಾತಕ್ಕೀಡಾಗಿದ್ದು, ಅಲ್ಲೇ ಎಂಟು ಜನರು ಸಾವನ್ನಪ್ಪಿದ್ದಾರೆ. “ಗಂಭೀರ ಧೂಳಿನ ಬಿರುಗಾಳಿ”ಯಿಂದಾಗಿ ಗೋಚರತೆ ಕ್ಷೀಣಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮಿಸೌರಿ ರಾಜ್ಯ ಹೆದ್ದಾರಿ ಗಸ್ತು ತಂಡವು ಚಂಡಮಾರುತ ಸಂಬಂಧಿತ 12 ಸಾವುನೋವುಗಳನ್ನು ದೃಢಪಡಿಸಿದೆ. ಮರೀನಾದಲ್ಲಿ ದೋಣಿಗಳು ಒಂದರ ಮೇಲೊಂದು ರಾಶಿ ಬಿದ್ದಿರುವ ಫೋಟೋಗಳು ವೈರಲ್ ಆಗಿವೆ. ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವು ಕಟ್ಟಡಗಳಿಗೆ ಹಾನಿಯಾಗಿದೆ.
ಮಿಸ್ಸೌರಿಯ ವೇಯ್ನ್ ಕೌಂಟಿಯಲ್ಲಿ 6, ಒಜಾರ್ಕ್ ಕೌಂಟಿಯಲ್ಲಿ 3 ಮತ್ತು ಬಟ್ಲರ್, ಜೆಫರ್ಸನ್ ಮತ್ತು ಸೇಂಟ್ ಲೂಯಿಸ್ ಕೌಂಟಿಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟೆಕ್ಸಾಸ್‌ನ ದಕ್ಷಿಣದಲ್ಲಿ ವಾಹನ ಅಪಘಾತಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.
ನೆರೆಯ ರಾಜ್ಯ ಅರ್ಕನ್ಸಾಸ್‌ನಲ್ಲಿ ಚಂಡಮಾರುತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. 29 ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗವರ್ನರ್ ಸಾರಾ ಹಕ್ಕಾಬೀ ಸ್ಯಾಂಡರ್ಸ್ ಅವರು ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಮಧ್ಯ ಅಮೆರಿಕದ ಬಹುತೇಕ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಸುಮಾರು 2 ಲಕ್ಷ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಿಸ್ಸಿಸ್ಸಿಪ್ಪಿ ಮತ್ತು ಟೆನ್ನೆಸ್ಸಿ ಸೇರಿದಂತೆ ಮಧ್ಯ ಗಲ್ಫ್ ಕರಾವಳಿ ರಾಜ್ಯಗಳಲ್ಲಿ ಸುಂಟರಗಾಳಿ ಮತ್ತಷ್ಟು ತೀವ್ರವಾಗುವ ಮುನ್ಸೂಚನೆ ನೀಡಲಾಗಿದೆ. 2024ರಲ್ಲೂ ಅಮೆರಿಕದಲ್ಲಿ ಸುಂಟರಗಾಳಿ ಸಂಬಂಧಿ ದುರ್ಘಟನೆಗಳಿಂದಾಗಿ 54 ಮಂದಿ ಮೃತಪಟ್ಟಿದ್ದರು.