ನವದೆಹಲಿ : ಆರೋಗ್ಯ ಕ್ಷೇತ್ರದಲ್ಲಿ ಆಯುಷ್ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ಸರ್ಕಾರ, ದೇಶದ ವಿವಿಧೆಡೆ ಆಯುರ್ವೇದ ಆಧಾರಿತ ಮೂರು ಹೊಸ ‘ಏಮ್ಸ್’ (AIIMS) ಆಸ್ಪತ್ರೆಗಳನ್ನು ಸ್ಥಾಪಿಸುವುದಾಗಿ ತಿಳಿಸಿದೆ. ಇದರ ಜೊತೆಗೆ ಯೋಗ ಮತ್ತು ವೆಲ್ನೆಸ್ ಸೇವೆಗಳನ್ನು ಉತ್ತೇಜಿಸಲು ದೇಶಾದ್ಯಂತ 1.5 ಲಕ್ಷ ಕೇರ್‌ಗಿವರ್(ಆರೋಗ್ಯ ಸೇವಾದಾರರು) ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ. ಇನ್ನು ಪಶುಸಂಗೋಪನಾ ಕ್ಷೇತ್ರಕ್ಕೆ ಪೂರಕವಾಗಿ ವೆಟರಿನರಿ ಕಾಲೇಜುಗಳು ಮತ್ತು ಪ್ರಯೋಗಾಲಯಗಳಿಗೆ ಸಾಲ ಆಧಾರಿತ ಸಬ್ಸಿಡಿ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಐದು ಹೊಸ ವಿಶ್ವವಿದ್ಯಾಲಯ ಟೌನ್‌ಶಿಪ್
ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಕಾರಿಡಾರ್‌ಗಳ ಸಮೀಪದಲ್ಲಿ ಐದು ಬೃಹತ್ ವಿಶ್ವವಿದ್ಯಾಲಯ ಟೌನ್‌ಶಿಪ್‌ಗಳನ್ನು (University Townships) ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಟೌನ್‌ಶಿಪ್‌ಗಳು ಕೇವಲ ಶಿಕ್ಷಣ ಸಂಸ್ಥೆಗಳಲ್ಲದೆ, ಸುಧಾರಿತ ಸಂಶೋಧನಾ ಮೂಲಸೌಕರ್ಯ ಮತ್ತು ವಸತಿ ಸೌಲಭ್ಯಗಳನ್ನು ಒಳಗೊಂಡಿರಲಿವೆ. ಇದರೊಂದಿಗೆ ದೇಶದ ಪೂರ್ವ ಭಾಗದಲ್ಲಿ ಹೊಸ ‘ವಿನ್ಯಾಸ ಸಂಸ್ಥೆ’ (Design Institute) ಮತ್ತು ಮುಂಬೈನ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್’ ಸಹಯೋಗದೊಂದಿಗೆ ದೇಶದ 15,000 ಪ್ರೌಢಶಾಲೆಗಳಲ್ಲಿ ಕಂಟೆಂಟ್ ಲ್ಯಾಬ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಖಗೋಳ ವಿಜ್ಞಾನ ಮತ್ತು ಸಂಶೋಧನೆಗೆ ಬೂಸ್ಟ್
ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಉತ್ತೇಜನ ನೀಡಲು ನಾಲ್ಕು ಪ್ರಮುಖ ಟೆಲಿಸ್ಕೋಪ್ ಮತ್ತು ಖಗೋಳ ವಿಜ್ಞಾನ ಕೇಂದ್ರಗಳನ್ನು ಆಧುನೀಕರಿಸಲು ಸರ್ಕಾರ ನಿರ್ಧರಿಸಿದೆ. ಇದು ಜಾಗತಿಕ ಖಗೋಳ ಅಧ್ಯಯನಗಳಲ್ಲಿ ಭಾರತದ ಪಾತ್ರವನ್ನು ಹೆಚ್ಚಿಸಲಿದೆ. ಒಟ್ಟಾರೆಯಾಗಿ, 2026ರ ಬಜೆಟ್ ಮೂಲಸೌಕರ್ಯದ ಜೊತೆಗೆ ಮಾನವ ಸಂಪನ್ಮೂಲ ಅಭಿವೃದ್ಧಿಗೆ, ವಿಶೇಷವಾಗಿ ಮಹಿಳೆಯರ ಮತ್ತು ಯುವಜನರ ಶೈಕ್ಷಣಿಕ ಏಳಿಗೆಗೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ಕಾಣಬಹುದು.
ಇದನ್ನೂ ಓದಿ : ದೇಶದ 7 ಮಾರ್ಗಗಳಲ್ಲಿ ಹೈಸ್ಪೀಡ್ ರೈಲು ಕಾರಿಡಾರ್ | ಬೆಂಗಳೂರಿಗೆ ಡಬಲ್ ಖುಷಿ



















