ಮುಂಬೈ : ದೇಶದ ಖ್ಯಾತ ಕನ್ನಡಕ ಮಾರಾಟ ಸಂಸ್ಥೆ ‘ಲೆನ್ಸ್‌ಕಾರ್ಟ್‘ ಮಳಿಗೆಗಳಲ್ಲಿ ಹಿಂದೂ ಧಾರ್ಮಿಕ ಚಿಹ್ನೆಗಳಾದ ಬಿಂದಿ, ತಿಲಕ ಧರಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂಬ ವಿವಾದವು ಭಾರಿ ಸದ್ದು ಮಾಡುತ್ತಿರುವಂತೆಯೇ ಇಂದು ಬೆಳಗ್ಗೆ ಮುಂಬೈನ ಮಳಿಗೆಯೊಂದಕ್ಕೆ ನುಗ್ಗಿದ ಬಿಜೆಪಿ ನಾಯಕಿ ನಜಿಯಾ ಇಲಾಹಿ ಖಾನ್ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಸಿಬ್ಬಂದಿಯ ಹಣೆಗೆ ತಿಲಕ ಇಟ್ಟು, ಕೈಗೆ ರಕ್ಷಾದಾರ ಕಟ್ಟಿರುವ ಘಟನೆ ನಡೆದಿದೆ.
ಮಳಿಗೆಗೆ ನುಗ್ಗಿ ಸಿಬ್ಬಂದಿಗೆ ತಿಲಕ ಇಟ್ಟ ನಾಯಕಿ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಬಿಜೆಪಿ ನಾಯಕಿ ನಜಿಯಾ ಇಲಾಹಿ ಖಾನ್ ಅವರು ಮಳಿಗೆಯೊಳಗೆ ಪ್ರವೇಶಿಸಿ ಫ್ಲೋರ್ ಮ್ಯಾನೇಜರ್ ಮೊಹ್ಸಿನ್ ಖಾನ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವುದು ಸೆರೆಯಾಗಿದೆ. ಸಿಬ್ಬಂದಿಗೆ ಬಿಂದಿ, ತಿಲಕ ಇಡದಂತೆ ಏಕೆ ನಿರ್ಬಂಧ ಹೇರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ತಮ್ಮ ಜೊತೆಗಿದ್ದವರಿಗೆ ಮ್ಯಾನೇಜರ್ ಹಣೆಗೆ ಬಲವಂತವಾಗಿ ತಿಲಕ ಇಡುವಂತೆ ಸೂಚಿಸಿದ್ದಾರೆ.

ಧಾರ್ಮಿಕ ಗುರುತನ್ನು ಪ್ರದರ್ಶಿಸಲು ಯಾವುದೇ ನಾಚಿಕೆಪಡುವ ಅಗತ್ಯವಿಲ್ಲ ಎಂದು ಹೇಳುತ್ತಾ ಹಿಂದೂ ಸಿಬ್ಬಂದಿಗಳನ್ನು ಮುಂದೆ ಕರೆದು ಅವರ ಹಣೆಗೆ ತಿಲಕ ಇಟ್ಟು, ಕೈಗೆ ಪವಿತ್ರ ದಾರ (ಕಲಾವ) ಕಟ್ಟಿದ್ದಾರೆ. ಅಲ್ಲದೆ, “ಇದು ಹಿಂದೂ ರಾಷ್ಟ್ರ. ಮಾಲೀಕರು ಕ್ಷಮೆಯಾಚಿಸದಿದ್ದರೆ ಲೆನ್ಸ್‌ಕಾರ್ಟ್ ಅನ್ನು ಬಹಿಷ್ಕರಿಸಲಾಗುವುದು ಅಥವಾ ಅದರ ಎಲ್ಲಾ ಮಳಿಗೆಗಳನ್ನು ಮುಚ್ಚಲಾಗುವುದು” ಎಂದು ಅವರು ಎಚ್ಚರಿಸಿದ್ದಾರೆ. ಈ ವೇಳೆ ಮ್ಯಾನೇಜರ್ ಅವರ ನೇಮಕಾತಿಯು ಧರ್ಮದ ಆಧಾರದ ಮೇಲೆ ನಡೆದಿದೆಯೇ ಎಂದೂ ಅವರು ಪ್ರಶ್ನಿಸಿದ್ದಾರೆ.
ಸಿಬ್ಬಂದಿಯ ಗಂಭೀರ ಆರೋಪ
ಈ ಗದ್ದಲದ ನಡುವೆ ಮಳಿಗೆಯ ಸಿಬ್ಬಂದಿಯೊಬ್ಬರು ತರಬೇತಿಯ ಸಮಯದಲ್ಲಿ ನಡೆದ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಕಂಪನಿಯ ತರಬೇತಿಯ ವೇಳೆ ಸಿಬ್ಬಂದಿಗೆ ತಿಲಕ ಮತ್ತು ಕೈಗೆ ಪವಿತ್ರ ದಾರವನ್ನು ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು. ಅಷ್ಟೇ ಅಲ್ಲದೆ, ವಿವಾಹಿತ ಮಹಿಳಾ ಉದ್ಯೋಗಿಗಳಿಗೆ ಮಂಗಳಸೂತ್ರ ಧರಿಸಲೂ ಅವಕಾಶವಿರಲಿಲ್ಲ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಏನಿದು ಲೆನ್ಸ್‌ಕಾರ್ಟ್ ವಿವಾದ?
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ವಿಧಿಸಿರುವ ವಸ್ತ್ರಸಂಹಿತೆಯಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿ, ಹಿಂದೂ ಉದ್ಯೋಗಿಗಳಿಗೆ ಬಿಂದಿ ಮತ್ತು ತಿಲಕವನ್ನು ನಿರ್ಬಂಧಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ರಾಜಕೀಯ ವಿಶ್ಲೇಷಕಿ ಶೆಫಾಲಿ ವೈದ್ಯ ಅವರು ‘ಎಕ್ಸ್’ ಖಾತೆಯಲ್ಲಿ ಈ ತಾರತಮ್ಯದ ಬಗ್ಗೆ ಧ್ವನಿ ಎತ್ತಿದ ಬಳಿಕ ವಿವಾದ ತಾರಕಕ್ಕೇರಿತು.
ನೆಟ್ಟಿಗರಿಂದ ತೀವ್ರ ವಿರೋಧ ಹಾಗೂ ಬಹಿಷ್ಕಾರದ ಬೆದರಿಕೆಗಳು ಕೇಳಿಬಂದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಲೆನ್ಸ್‌ಕಾರ್ಟ್ ಸಿಇಒ ಪಿಯೂಷ್ ಬನ್ಸಾಲ್, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದಾಖಲೆಯು ಹಳೆಯದಾಗಿದ್ದು, ಅದು ಕಂಪನಿಯ ಪ್ರಸ್ತುತ ನೀತಿಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಮಳಿಗೆಗಳ ಸಿಬ್ಬಂದಿಗಾಗಿ ಪರಿಷ್ಕೃತ ಶೈಲಿಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿರುವ ಕಂಪನಿಯು, ಉದ್ಯೋಗಿಗಳು ತಮ್ಮ ನಂಬಿಕೆ ಮತ್ತು ಧಾರ್ಮಿಕ ಗುರುತಿನ ಸಂಕೇತಗಳನ್ನು ಕಚೇರಿಯಲ್ಲಿ ಧರಿಸಲು ಮುಕ್ತ ಅವಕಾಶವಿದೆ ಎಂದು ಸ್ಪಷ್ಟಪಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಯತ್ನ ಮಾಡಿದೆ.
ಇದನ್ನೂ ಓದಿ : 50 ವರ್ಷಗಳ ಸಕ್ರಿಯ ರಾಜಕಾರಣ ಪೂರ್ಣ – ಮೇ 9ಕ್ಕೆ ಚಿತ್ರದುರ್ಗದಲ್ಲಿ ಬಿಎಸ್‌ವೈ ಅಭಿಮಾನೋತ್ಸವ!


















