ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳ ವಿಚಾರ ಸಖತ್ ಸದ್ದು ಮಾಡುತ್ತಿದೆ. ಇತ್ತ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿಗಳು ಸಹ ಬೇಸರವನ್ನು ಹೊರಹಾಕುತ್ತಿದ್ದರೆ, ಅತ್ತ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟೀಕೆ ಮಾಡುತ್ತಿದೆ. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ನಾವು ಮಳೆ ಬಂದರೂ ಗುಂಡಿಗಳನ್ನು ಮುಚ್ಚುತ್ತಿದ್ದೇವೆ ಎಂದು ಹೇಳಿದರು.
ಒಂದೊಂದು ಕಾರ್ಪೊರೇಷನ್‌ನಲ್ಲಿ ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ನಾನು ದೆಹಲಿಗೆ ಹೋಗಿದ್ದೆ, ದೆಹಲಿ ಎಲ್ಲಾ ಒಂದು ರೌಂಡ್ ಹಾಕಿದ್ದೆ, ಪ್ರಧಾನಿಗಳ ಮನೆಯ ರಸ್ತೆಯಲ್ಲೂ ಗುಂಡಿಗಳು ಇವೆ.
ದೊಡ್ಡ ದೊಡ್ಡ ಐಟಿ ಕಂಪನಿಗಳಿಗೂ ನಾನು ಹೇಳ್ತೇನೆ. ಗುಂಡಿಗಳು ದೇಶದ ಎಲ್ಲಾ ಕಡೆಗಳಲ್ಲಿಯೂ ಇವೆ. ಆದರೆ ನಾವು ನಮ್ಮ ಡ್ಯೂಟಿಯನ್ನು ಮಾಡುತ್ತಿದ್ದೇವೆ. ಇದನ್ನು ದೊಡ್ಡದಾಗಿ ಬಿಂಬಿಸೋದು ಸರಿಯಲ್ಲ. ಬಿಜೆಪಿಯವರು ರಸ್ತೆ ಚೆನ್ನಾಗಿ ಮಾಡ್ಕೊಂಡು ಬಂದಿದ್ರೆ, ಈ ಪರಿಸ್ಥಿತಿ ಯಾಕೆ ಬರುತ್ತಿತ್ತು..? ಚುನಾವಣೆ ಹತ್ತಿರ ಬರುತ್ತಿದೆ ಎಂದು ಹೀಗೆ ಮಾತಾಡ್ತಾ ಇರಬಹುದು, ಇರಲಿ ಮಾತಾಡಲಿ ಎಂದು ಬಿಜೆಪಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.