ಉಡುಪಿ: ನಾವು ಯಾರಿಂದಲಾದರೂ ಏನನ್ನಾದರೂ ಪಡೆದರೆ ಅದನ್ನು ತಿರುಗಿ ಕೊಡಬೇಕು. ಸಮಾಜದಿಂದ ಪಡೆದದ್ದನ್ನು ಮತ್ತೆ ಪ್ರಜೆಗಳಿಗೆ ಕೊಡುವುದು ಸರ್ಕಾರದ ಕರ್ತವ್ಯ. ಸರ್ಕಾರದಿಂದ ಪಡೆದದ್ದನ್ನು ತೆರಗೆಯ ರೂಪದಲ್ಲಿ ಮತ್ತೆ ಕೊಡುವುದು ಪ್ರಜೆಗಳ ಕರ್ತವ್ಯ. ಹೀಗೆ ಪ್ರತ್ಯಾರ್ಪಣ ಜಗತ್ತಿನ ಮೂಲ ತತ್ವ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ ಪ್ರಯುಕ್ತ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ವೇಣು ಮಂಡಲೋತ್ಸವ, ಜ್ಞಾನ ಮಂಡಲೋತ್ಸವ ಹಾಗೂ ಸಾಂಸ್ಕೃತಿಕ ಮಂಡಲೋತ್ಸವಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತು ಕೃಷ್ಣನಿಂದ ಅನುಗ್ರಹವನ್ನು ಪಡೆದಿದೆ, ಆದ್ದರಿಂದ ಕೃಷ್ಣನಿಗೆ ನಮ್ಮ ಕೃತಜ್ಞತೆಯನ್ನು ಸಮರ್ಪಿಸುವುದು ನಮ್ಮ ಕರ್ತವ್ಯವಾಗಿದೆ ಎಂದಿದ್ದಾರೆ.
ಶ್ರೀಕೃಷ್ಣ, ಶ್ರೀರಾಮರ ಆದರ್ಶಗಳು ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯಗಳ ತಿರುಳಾಗಿದೆ. ಆದ್ದರಿಂದಲೇ ಜಗತ್ತಿನಲ್ಲಿ ಸಾಂಸ್ಕೃತಿಕತೆಗೆ ವಿಶೇಷ ಮಹತ್ವವಿದೆ ಎಂದು ಅಭಿಪ್ರಾಯಪಟ್ಟರು.



















