ಹಾವೇರಿ: ದೇಶದೆಲ್ಲೆಡೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿಯನ್ನು ಸ್ಥಾಪಿಸಿ ವಿಸರ್ಜನೆ ಮಾಡಲಾಯಿತು. ಆದರೆ ಶಿಗ್ಗಾಂವ್ ತಾಲೂಕು ಬಂಕಾಪುರದ ಶಿಗ್ಗಾಂವ್ ತಾಲೂಕು ಬಂಕಾಪುರದಲ್ಲಿ ಹಾವೇರಿ ಪೋಲಿಸರು ಡಿಜೆಗೆ ಅನುಮತಿ ನೀಡಿಲ್ಲ ಎಂಬ ಕಾರಣಕ್ಕಾಗಿ 44 ದಿನ ಕಳೆದರು ಗಣಪತಿ ವಿಸರ್ಜನೆ ನಡೆದಿಲ್ಲ.
ಮಹಾಸಭಾದ ಗಣಪತಿ ಸಂಘದವರು ಡಿಜೆ ಅನುಮತಿ ನೀಡದಿದ್ದರೆ ವಿಸರ್ಜಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತ್ತಿದ್ದಾರೆ. ನಾವು ಕಳೆದ 42 ವರ್ಷಗಳಿಂದ ಗಣೇಶ ಮೂರ್ತಿ ಇರಿಸಿ ಸಾರ್ವಜನಿಕ ಸ್ಥಳದಲ್ಲಿ ಪೂಜೆ ಮಾಡುತ್ತಾ ಬರುತ್ತಿದ್ದೇವೆ. 42 ವರ್ಷಗಳಲ್ಲಿ ಯಾವುದೇ ಗದ್ದಲ ಗಲಾಟೆ ನಡೆದಿಲ್ಲ. ಎಂದಿನಂತೆ ಈ ವರ್ಷ ಸಹ ನಮಗೆ ಡಿಜೆ ಬಳಕೆಗೆ ಅನುಮತಿ ನೀಡಬೇಕು. ರಾತ್ರಿ 10 ಗಂಟೆಯಿಂದ ಆರಂಭವಾಗುವ ಶೋಭಾಯಾತ್ರೆಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡಬೇಕು ಎಂದು ಸಂಘಟಕರು ಆಗ್ರಹಿಸುತ್ತಿದ್ದಾರೆ.
ಈ ಮಧ್ಯೆ ಇದೇ ಭಾನುವಾರ ಬಂಕಾಪುರ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮಾಡಲು ಹಿಂದೂ ಮಹಸಭಾ ನಿರ್ಧರಿಸಿದೆ. ಈ ಕುರಿತಂತೆ ಪೊಲೀಸ್ ಇಲಾಖೆಗೆ ಸಹ ತಿಳಿಸಿದೆ. ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಸಹ ಸಂಘಟನೆಯ ಸದಸ್ಯರ ಜೊತೆ ಮಾತನಾಡಿದ್ದಾರೆ. ಅಲ್ಲದೆ ಭಾನುವಾರ ನಡೆಯುವ ಶೋಭಾ ಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಭಾನುವಾರ ಗಣಪತಿ ವಿಸರ್ಜನೆ ಮಾಡಲು ಸಂಘಟನೆಯವರು ಮುಂದಾಗಿದ್ದಾರೆ. ಆದರೆ ಆದೇಶ ಉಲ್ಲಂಘನೆ ಮಾಡಿದರೆ ಮಾತ್ರ ಪ್ರಕರಣ ದಾಖಲಿಸಲಾಗುತ್ತದೆ. ಡಿಜೆ ವಶಕ್ಕೆ ಪಡೆಯಲಾಗುತ್ತದೆ ಎಂದು ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಎಚ್ಚರಿಕೆ ನೀಡಿದ್ದಾರೆ.