ವಾಷಿಂಗ್ಟನ್: ಮಹಿಳೆಯೊಬ್ಬರ ತಲೆತುಂಬ ಹೇನು ಕಾಣಿಸಿದ್ದರಿಂದ ಅಮೆರಿಕದ ವಿಮಾನವೊಂದು ತುರ್ತು ಭೂ ಸ್ಪರ್ಶ ಮಾಡಿದೆ ಎನ್ನಲಾಗಿದೆ.
ಮಹಿಳೆಯ ತಲೆಯ ತುಂಬಾ ಹೇನು ಹರಿದಾಡುತ್ತಿರುವುದನ್ನು ಗಮನಿಸಿದ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಶಾಕ್ ಗೆ ಒಳಗಾಗಿದ್ದಾರೆ. ನಂತರ ಆ ಮಹಿಳೆಯ ಪಕ್ಕದಲ್ಲಿ ಕೂಡಲು ಆಗದೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸುವಂತೆ ಹೇಳಿದ್ದಾರೆ. ಸದ್ಯ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ತಲೆಯಲ್ಲಿ ಒಂದೇ ಒಂದು ಹೇನು ಸೇರಿಕೊಂಡರೂ ವಿಪರೀತ ಕೆರೆತ ಉಂಟಾಗುತ್ತದೆ. ಇದು ದಿನನಿತ್ಯದ ಕೆಲಸಕ್ಕೆ ಸಾಕಷ್ಟು ಅಡ್ಡಿ ಸೃಷ್ಟಿಸುತ್ತದೆ. ಆದರೆ, ತಲೆ ತುಂಬಾ ಹೇನು ಕಂಡರೆ ಒಂದು ಕ್ಷಣ ತಲೆ ತಿರುಗುವದಂತೂ ಗ್ಯಾರಂಟಿ. ಹೀಗಾಗಿಯೇ ಮಹಿಳೆಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಭಯ ಬಿದ್ದಿರಬಹುದು. ಲಾಸ್ ಎಂಜಲ್ಸ್ ನಿಂದ ನ್ಯೂಯಾರ್ಕ್ ಗೆ ಪ್ರಯಾಣಿಸುತ್ತಿದ್ದ ವಿಮಾನವನ್ನು ಫೋನಿಕ್ಸ್ ನಲ್ಲಿ ಲ್ಯಾಂಡ್ ಮಾಡಲಾಗಿದೆ.
ಈ ಘಟನೆ ಕುರಿತು ಟಿಕ್ ಟಾಕ್ ಕ್ರಿಯೆಟರ್ ಎಥನ್ ಜುಡೆಲ್ಸನ್ ಎಂಬವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈಗ ಹೇನಿನ ಸಮಸ್ಯೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.