ಅಷ್ಗಾಬಾತ್: ತುರ್ಕ್‌ಮೆನಿಸ್ತಾನದ ಕರಕುಮ್‌ನ ಮಧ್ಯಭಾಗದಲ್ಲಿ ಕಳೆದ 50 ವರ್ಷಗಳಿಂದ ಧಗಧಗಿಸುತ್ತಿದ್ದ “ಗೇಟ್‌ವೇ ಟು ಹೆಲ್”(ನರಕದ ದ್ವಾರ) ಎಂದೇ ಕರೆಯಲ್ಪಡುವ ದರ್ವಾಜಾ ಗ್ಯಾಸ್ ಕ್ರೇಟರ್‌ನ ಬೆಂಕಿಯನ್ನು ಕೊನೆಗೂ ಕಡಿಮೆಗೊಳಿಸಲಾಗಿದೆ ಎಂದು ತುರ್ಕಮೆನಿಸ್ತಾನದ ಅಧಿಕಾರಿಗಳು ಘೋಷಿಸಿದ್ದಾರೆ. ಈ ಅಪೂರ್ವ ಘಟನೆಯು ವಿಶ್ವದಾದ್ಯಂತ ಗಮನ ಸೆಳೆದಿದ್ದು, ಈ ಐತಿಹಾಸಿಕ ಬಿರುಕಿನ ಇತಿಹಾಸ, ಅದರ ಮಹತ್ವ ಮತ್ತು ಪರಿಸರದ ಮೇಲಿನ ಪರಿಣಾಮಗಳ ಕುರಿತು ಭಾರೀ ಚರ್ಚೆ ಆರಂಭವಾಗಿದೆ.
ದರ್ವಾಜಾ ಗ್ಯಾಸ್ ಕ್ರೇಟರ್‌ನ ಇತಿಹಾಸ
ದರ್ವಾಜಾ ಗ್ಯಾಸ್ ಕ್ರೇಟರ್, ಇದನ್ನು ಸ್ಥಳೀಯವಾಗಿ “ಗೇಟ್‌ವೇ ಟು ಹೆಲ್” ಎಂದು ಕರೆಯಲಾಗುತ್ತದೆ. ಅಂದರೆ ನರಕಕ್ಕೆ ಹೋಗುವ ದ್ವಾರ ಎಂದು ಅರ್ಥ. ಇದು ತುರ್ಕಮೆನಿಸ್ತಾನದ ದರ್ವಾಜಾ ಗ್ರಾಮದ ಬಳಿಯ ಕರಕುಮ್ ಎಂಬಲ್ಲಿರುವ 230 ಅಡಿ ಅಗಲ ಮತ್ತು 65 ಅಡಿ ಆಳವಾದ ಒಂದು ದೈತ್ಯ ಗುಂಡಿಯಾಗಿದೆ. 1971ರಲ್ಲಿ ಸೋವಿಯತ್ ಒಕ್ಕೂಟದ ಭೂವಿಜ್ಞಾನಿಗಳು ಈ ಪ್ರದೇಶದಲ್ಲಿ ನೈಸರ್ಗಿಕ ಗ್ಯಾಸ್‌ಗಾಗಿ ಕೊರೆಯುವಾಗ, ಭೂಮಿಯ ಮೇಲ್ಮೈ ಕುಸಿದು ಈ ಗುಂಡಿ ಸೃಷ್ಟಿಯಾಯಿತು.

ಈ ಗುಂಡಿಯೊಳಗೆ ದೊಡ್ಡ ಪ್ರಮಾಣದ ಮೀಥೇನ್ ಗ್ಯಾಸ್ ಇದ್ದು, ಇದರಿಂದ ಉಂಟಾಗಬಹುದಾದ ವಿಷಕಾರಿ ಗ್ಯಾಸ್ ಹರಡುವಿಕೆಯನ್ನು ತಡೆಗಟ್ಟಲು ವಿಜ್ಞಾನಿಗಳು ಈ ಗುಂಡಿಗೆ ಬೆಂಕಿ ಹಚ್ಚಿದರು. ಅವರು ಈ ಬೆಂಕಿಯು ಇನ್ನೇನು ಕೆಲವೇ ದಿನಗಳಲ್ಲಿ ಆರಿಹೋಗಬಹುದು ಎಂದು ಭಾವಿಸಿದ್ದರು. ಆದರೆ ಅಚ್ಚರಿ ಹಾಗೂ ನಿಗೂಢವೆಂಬಂತೆ ಈ ಬೆಂಕಿಯು ಕಳೆದ 53 ವರ್ಷಗಳಿಂದ ನಿರಂತರವಾಗಿ ಉರಿಯುತ್ತಿದೆ.
ಆ ನಂತರದಲ್ಲಿ ಈ ದೈತ್ಯ ಗುಂಡಿಯೊಳಗೆ ಧಗಧಗಿಸುವ ಬೆಂಕಿಯು ತುರ್ಕಮೆನಿಸ್ತಾನದ ಪ್ರಮುಖ ಪ್ರವಾಸಿ ಆಕರ್ಷಣೆಯಾಯಿತು. ಅದನ್ನು ನೋಡಲೆಂದೇ ಸಾವಿರಾರು ಮಂದಿ ಅಲ್ಲಿಗೆ ಬರತೊಡಗಿದರು. ಇದು ವರ್ಷಕ್ಕೆ ಸುಮಾರು 10,000 ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. 2019ರಲ್ಲಿ, ತುರ್ಕಮೆನಿಸ್ತಾನದ ಆಗಿನ ಅಧ್ಯಕ್ಷ ಗುರ್ಬಾಂಗುಲಿ ಬೆರ್ಡಿಮುಖಮೆಡೋವ್ ತಾನು ಜೀವಂತವಾಗಿರುವುದನ್ನು ಸಾಬೀತುಪಡಿಸಲು ಈ ಕ್ರೇಟರ್‌ನ ಸುತ್ತಲೂ ರ‍್ಯಾಲಿ ಕಾರನ್ನು ಓಡಿಸಿದ್ದು ಜಾಗತಿಕವಾಗಿ ಗಮನ ಸೆಳೆದಿತ್ತು.
ಪರಿಸರದ ಮೇಲಿನ ಪರಿಣಾಮ?
ತುರ್ಕಮೆನಿಸ್ತಾನವು ವಿಶ್ವದ ನಾಲ್ಕನೇ ಅತಿದೊಡ್ಡ ನೈಸರ್ಗಿಕ ಅನಿಲ ಸಂಗ್ರಹವನ್ನು ಹೊಂದಿದೆ. ಆದರೆ ಈ ಗುಂಡಿಯಿಂದ ಹೊರಸೂಸಲ್ಪಡುವ ಮೀಥೇನ್ ಅನಿಲವು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿದೆ. ಮೀಥೇನ್ ಒಂದು ಶಕ್ತಿಶಾಲಿ ಹಸಿರುಮನೆ ಅನಿಲವಾಗಿದ್ದು, ಇದು ಪರಿಸರಕ್ಕೆ ಮತ್ತು ಸ್ಥಳೀಯ ಜನರ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. 2022ರಲ್ಲಿ, ಆಗಿನ ಅಧ್ಯಕ್ಷ ಬೆರ್ಡಿಮುಖಮೆಡೋವ್ ಈ ಕ್ರೇಟರ್‌ನ ಬೆಂಕಿಯನ್ನು ಆರಿಸಿ, ಗ್ಯಾಸ್ ಸೋರಿಕೆಯನ್ನು ತಡೆಗಟ್ಟುವಂತೆ ಸೂಚಿಸಿದ್ದರು.
ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನ
ತುರ್ಕಮೆನಿಸ್ತಾನದ ಸರ್ಕಾರವು ಈ ಕ್ರೇಟರ್‌ನ ಬೆಂಕಿಯನ್ನು ಆರಿಸಲು ಹಲವಾರು ಬಾರಿ ಪ್ರಯತ್ನಿಸಿದೆ. ಆದರೆ ಈವರೆಗೆ ಯಶಸ್ಸು ಕಂಡಿರಲಿಲ್ಲ. 2022ರಲ್ಲಿ ತುರ್ಕಮೆನಿಸ್ತಾನದ ನೈಸರ್ಗಿಕ ಗ್ಯಾಸ್ ಸಂಸ್ಥೆಯ ಮುಖ್ಯಸ್ಥ ಬೈರಾಮ್‌ಮಿರಾತ್ ಪಿರ್ನಿಯಾಜೋವ್ ಅವರು, ಕ್ರೇಟರ್‌ನ ಭೂವೈಜ್ಞಾನಿಕ ರಚನೆಯನ್ನು ಅಧ್ಯಯನ ಮಾಡಿ, ಇದನ್ನು ಸಂಪೂರ್ಣವಾಗಿ ಮುಚ್ಚಲು ಯೋಜನೆ ರೂಪಿಸಲಾಗುವುದು ಎಂದು ಘೋಷಿಸಿದ್ದರು. ಬೆಲಾರಸ್ ಮತ್ತು ಸ್ಲೊವೇನಿಯಾದ ವಿಜ್ಞಾನಿಗಳು ಈ ಯೋಜನೆಯಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿದ್ದರು.
ಇತ್ತೀಚಿನ ವರದಿಗಳ ಪ್ರಕಾರ, ಈ ಪ್ರಯತ್ನಗಳು ಫಲ ನೀಡಿದ್ದು, ಈ ದೈತ್ಯ ಗುಂಡಿಯೊಳಗಿನ ಬೆಂಕಿಯನ್ನು ಗಣನೀಯವಾಗಿ ಕಡಿಮೆಗೊಳಿಸಲಾಗಿದೆ. ಇದು ತುರ್ಕಮೆನಿಸ್ತಾನದ ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಆದರೂ, ಕ್ರೇಟರ್‌ನ ಬೆಂಕಿಯನ್ನು ಸಂಪೂರ್ಣವಾಗಿ ಆರಿಸಲು ಇನ್ನೂ ಕೆಲವು ಸವಾಲುಗಳಿವೆ ಎಂದು ತಜ್ಞರು ತಿಳಿಸಿದ್ದಾರೆ.
ಭವಿಷ್ಯದ ಯೋಜನೆಗಳು
ತುರ್ಕಮೆನಿಸ್ತಾನದ ಸರ್ಕಾರವು ಈ ಕ್ರೇಟರ್‌ನಿಂದ ಹೊರಸೂಸಲ್ಪಡುವ ಅನಿಲವನ್ನು ಸಂಗ್ರಹಿಸಿ, ಇದನ್ನು ಶಕ್ತಿಯ ಉತ್ಪಾದನೆಗೆ ಬಳಸಿಕೊಳ್ಳುವ ಯೋಜನೆಯ ಸಾಧ್ಯಾಸಾಧ್ಯತೆಯನ್ನು ಪರಿಗಣಿಸುತ್ತಿದೆ. ಇದರಿಂದ ದೇಶದ ಆರ್ಥಿಕತೆಗೆ ಲಾಭವಾಗುವುದರ ಜೊತೆಗೆ, ಪರಿಸರದ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಈ ಕ್ರೇಟರ್‌ನ ಬೆಂಕಿಯನ್ನು ಸಂಪೂರ್ಣವಾಗಿ ಆರಿಸುವುದು ಸಾಧ್ಯವಾದರೆ, ಇದು ತುರ್ಕಮೆನಿಸ್ತಾನದ ಪರಿಸರ ನೀತಿಗಳಲ್ಲಿ ಒಂದು ಮಹತ್ವದ ಯಶಸ್ಸಾಗಿರುತ್ತದೆ.
ದರ್ವಾಜಾ ಗ್ಯಾಸ್ ಕ್ರೇಟರ್, ತನ್ನ ಅಪೂರ್ವ ದೃಶ್ಯ ಮತ್ತು ರಹಸ್ಯಮಯ ಇತಿಹಾಸದಿಂದ ವಿಶ್ವದ ಗಮನ ಸೆಳೆದಿದೆ. 50 ವರ್ಷಗಳಿಂದ ಉರಿಯುತ್ತಿರುವ ಈ “ಗೇಟ್‌ವೇ ಟು ಹೆಲ್” ಈಗ ತನ್ನ ಅಂತಿಮ ದಿನಗಳನ್ನು ಕಾಣುತ್ತಿದೆ. ತುರ್ಕಮೆನಿಸ್ತಾನದ ಈ ಯಶಸ್ಸು, ಪರಿಸರ ಸಂರಕ್ಷಣೆಯ ಕಡೆಗಿನ ಅವರ ಬದ್ಧತೆಯನ್ನು ತೋರಿಸುತ್ತದೆ. ಆದರೆ, ಈ ಕ್ರೇಟರ್‌ನ ಸಂಪೂರ್ಣ ಮುಕ್ತಾಯಕ್ಕಾಗಿ ಇನ್ನೂ ಕೆಲವು ಸಮಯ ಮತ್ತು ತಾಂತ್ರಿಕ ಪರಿಹಾರಗಳ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.



















