ಪಾರಿವಾಳ ಹಿಡಿಯುವುದಕ್ಕಾಗಿ ಖಾಸಗಿ ಬಸ್ ಚಾಲಕನೊಬ್ಬ ಸ್ಟೇರಿಂಗ್ ಬಿಟ್ಟಿದ್ದರಿಂದಾಗಿ ಬಸ್ ಪಲ್ಟಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಶ್ರೀರಂಗಪಟ್ಟಣ- ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬಸ್, ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಪರಿಣಾಮ ಬಸ್ ನಲ್ಲಿದ್ದ 16 ಜನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳ್ಳಾರಿಯಿಂದ ಶಿವಮೊಗ್ಗ ಕಡೆ ತೆರಳುತ್ತಿದ್ದ ಖಾಸಗಿ ಬಸ್ ಅಪಘಾತವಾಗಿದೆ.
ಚಾಲಕ ಮಂಜುನಾಥ ಸೇರಿದಂತೆ 11 ಜನ ಪುರುಷರು ಹಾಗೂ 6 ಜನ ಮಹಿಳೆಯರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮೊಳಕಾಲ್ಮುರು ತಾಲೂಕಿನ ರಾಂಪುರಕ್ಕೆ ಬಸ್ ಬಂದಾಗ, ಅಲ್ಲಿನ ಪಾರಿವಾಳ ಜೂಜಾಡುವವರು ಚಾಲಕನ ಕೈಗೆ ಪಾರಿವಾಳಗಳಿದ್ದ ಬಾಕ್ಸ್ ನೀಡಿ, ಚಳ್ಳಕೆರೆ ಇಲ್ಲವೇ ಚಿತ್ರದುರ್ಗ ಸಮೀಪ ಪರಿವಾಳಗಳನ್ನು ಹಾರಿ ಬಿಡುವಂತೆ ಹೇಳಿದ್ದರು ಎನ್ನಲಾಗಿದೆ.
ಬಸ್ ಚಲಿಸುತ್ತಿದ್ದಾಗ ಚಳ್ಳಕೆರೆ ಸಮೀಪದಲ್ಲಿ ಬಾಕ್ಸ್ ನಲ್ಲಿದ್ದ ಪಾರಿವಾಳವೊಂದು ಹಾರಿ ಹೋಗಿದೆ. ಆಗ ಚಾಲಕ ಮಂಜುನಾಥ, ಸ್ಟೇರಿಂಗ್ ಕೈಬಿಟ್ಟು ಪಾರಿವಾಳ ಹಿಡಿಯಲು ಮುಂದಾಗಿದ್ದಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಪ್ರಯಾಣಿಕರು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.